ತೈಲ ದರ ಮಿತಿಯನ್ನು ಒಪ್ಪುವುದಿಲ್ಲ: ರಶ್ಯ

ಮಾಸ್ಕೋ, ಮಾ.7: ತಾನು ರಫ್ತು ಮಾಡುವ ತೈಲದ ಬೆಲೆ ಮಿತಿಯನ್ನು ಪಾಶ್ಚಿಮಾತ್ಯ ದೇಶಗಳು ನಿಗದಿಗೊಳಿಸುವುದನ್ನು ಒಪ್ಪುವುದಿಲ್ಲ ಎಂದು ರಶ್ಯ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.
ರಶ್ಯ ರಫ್ತು ಮಾಡುವ ತೈಲದ ದರವನ್ನು ಪಾಶ್ಚಿಮಾತ್ಯ ದೇಶಗಳು ನಿಗದಿಗೊಳಿಸುವುದನ್ನು ಎಷ್ಟು ಮಾತ್ರಕ್ಕೂ ಒಪ್ಪಲಾಗದು. ಒಪ್ಪುವುದೂ ಇಲ್ಲ. ಈ ವ್ಯವಸ್ಥೆಯು ನಮ್ಮ ಹಿತಾಸಕ್ತಿಗೆ ಹಾನಿ ಎಸಗದಂತೆ ನಾವು ಕಾರ್ಯನಿರ್ವಹಿಸಲಿದ್ದೇವೆ ಎಂದು ರಶ್ಯ ಅಧ್ಯಕ್ಷರ ಕಚೇರಿ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ರಶ್ಯವು ತೈಲ ರಫ್ತಿನಿಂದ ಗಳಿಸಿದ ಆದಾಯವನ್ನು ಉಕ್ರೇನ್ ಮೇಲಿನ ದಾಳಿಯ ವೆಚ್ಚಕ್ಕೆ ಬಳಸುವುದನ್ನು ತಡೆಯಲು ಅಮೆರಿಕ ನೇತೃತ್ವದಲ್ಲಿ ಪಾಶ್ಚಿಮಾತ್ಯ ದೇಶಗಳು ರಶ್ಯದಿಂದ ರಫ್ತಾಗುವ ತೈಲದರಕ್ಕೆ ಮಿತಿ ಹೇರುವುದಾಗಿ ಘೋಷಿಸಿವೆ. ಇದಕ್ಕೆ ಪ್ರತಿಯಾಗಿ ಮಾರ್ಚ್‍ನಿಂದ ದೈನಂದಿನ ತೈಲ ಉತ್ಪಾದನೆಯಲ್ಲಿ 5 ಲಕ್ಷ ಬ್ಯಾರೆಲ್‍ನಷ್ಟು ಕಡಿತಗೊಳಿಸುವುದಾಗಿ ರಶ್ಯ ಘೋಷಿಸಿದೆ. ಜಾಗತಿಕ ತೈಲ ಪೂರೈಕೆಯ 10%ದಷ್ಟು ಪ್ರಮಾಣದ ತೈಲ ರಶ್ಯದಿಂದ ರಫ್ತಾಗುತ್ತದೆ.