ಚೀನಾ ನಿಗ್ರಹ ಯೋಜನೆಗೆ ಅಮೆರಿಕದ ನೇತೃತ್ವ: ಕ್ಸಿಜಿಂಪಿಂಗ್ ಆಕ್ರೋಶ

ಬೀಜಿಂಗ್, ಮಾ.7: ಚೀನಾವನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು, ನಿಗ್ರಹಿಸಲು ಮತ್ತು ಸುತ್ತುವರಿಯಲು ನಡೆಯುತ್ತಿರುವ ಯೋಜನೆಗೆ ಅಮೆರಿಕ ನೇತೃತ್ವ ವಹಿಸಿದೆ ಎಂದು ಚೀನಾದ ಅಧ್ಯಕ್ಷ ಕ್ಸಿಜಿಂಪಿಂಗ್ ಆರೋಪಿಸಿದ್ದು, ಆವಿಷ್ಕಾರವನ್ನು ಹೆಚ್ಚಿಸಿ ಇನ್ನಷ್ಟು ಸ್ವಾವಲಂಬಿಗಳಾಗುವಂತೆ ದೇಶದ ಖಾಸಗಿ ವಲಯಕ್ಕೆ ಕರೆ ನೀಡಿದ್ದಾರೆ.
ಅಮೆರಿಕ ಮತ್ತದರ ಪಾಶ್ಚಿಮಾತ್ಯ ಮಿತ್ರದೇಶಗಳು ಜಾರಿಗೊಳಿಸಿರುವ ನಿರ್ಬಂಧ ಕ್ರಮದಿಂದಾಗಿ ಚೀನಾದ ತಂತ್ರಜ್ಞಾನ ಕ್ಷೇತ್ರದ ಮಹಾತ್ವಾಕಾಂಕ್ಷೆಗೆ ತೀವ್ರ ಹಿನ್ನಡೆಯಾಗಿದೆ. ಮಂಗಳವಾರ ಉದ್ಯಮಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಅಮೆರಿಕದ ವಿರುದ್ಧ ನೇರ ಆರೋಪ ಮಾಡಿದ ಕ್ಸಿಜಿಂಪಿಂಗ್, ಚೀನಾದ ನಿಗ್ರಹಕ್ಕೆ ಅಮೆರಿಕ ನೇತೃತ್ವದಲ್ಲಿ ಪ್ರಯತ್ನ ಮುಂದುವರಿದಿರುವುದು ದೇಶದ ಅಭಿವೃದ್ಧಿಗೆ ತೀವ್ರ ಸವಾಲಾಗಿ ಪರಿಣಮಿಸಿದೆ ಎಂದರು.
ಕಳೆದ 5 ವರ್ಷಗಳಲ್ಲಿ ಎದುರಾಗಿದ್ದ ಹೊಸ ಅಡೆತಡೆಗಳು ಚೀನಾದ ಆರ್ಥಿಕ ಬೆಳವಣಿಗೆಗೆ ಬೆದರಿಕೆ ಒಡ್ಡಿವೆ. ದೇಶೀಯ ಮತ್ತು ಅಂತರಾಷ್ಟ್ರೀಯ ಭೂದೃಶ್ಯದಲ್ಲಿ ದೇಶವು ಆಳವಾದ ಮತ್ತು ಸಂಕೀರ್ಣ ಬದಲಾವಣೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಾವು ಹೋರಾಟದ ಛಾತಿಯನ್ನು ಹೊಂದಿರುವ ಅಗತ್ಯವಿದೆ ಎಂದು ಜಿಂಪಿಂಗ್ ಪ್ರತಿಪಾದಿಸಿದರು.
ಚೀನಾದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಸ್ವಾವಲಂಬಿಯಾಗಬೇಕು. 1.4 ಶತಕೋಟಿ ಜನಸಂಖ್ಯೆಯ ಮಹಾನ್ ದೇಶವಾಗಿರುವ ನಾವು ಪರರನ್ನು ಅವಲಂಬಿಸಬಾರದು. ನಮ್ಮ ಉಳಿವಿಗಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸುವ ಪರಿಸ್ಥಿತಿ ಬರಬಾರದು. ನಮ್ಮ ಊಟದ ತಟ್ಟೆ(ಕೃಷಿವಲಯ)ಯನ್ನು ರಕ್ಷಿಸುವುದು ಮತ್ತು ಬಲಿಷ್ಟ ಉತ್ಪಾದನಾ ಕ್ಷೇತ್ರದ ನಿರ್ಮಾಣಕ್ಕೆ ಮಹತ್ವ ನೀಡಬೇಕಾಗಿದೆ ಎಂದು ಜಿಂಪಿಂಗ್ ಹೇಳಿದ್ದಾರೆ.
ಬಳಿಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್, ಎರಡು ಶಕ್ತದೇಶಗಳ ನಡುವಿನ ಸಂಬಂಧ ಪರಸ್ಪರ ಹಿತಾಸಕ್ತಿ ಮತ್ತು ಸ್ನೇಹವನ್ನು ಆಧರಿಸಿರಬೇಕು ಎಂದರು. ಉಕ್ರೇನ್ ಯುದ್ಧದಲ್ಲಿ ಬಳಸಲು ರಶ್ಯಕ್ಕೆ ಚೀನಾದಿಂದ ಶಸ್ತ್ರಾಸ್ತ್ರ ಪೂರೈಕೆಯಾಗಲಿದೆ ಎಂಬ ಪಾಶ್ಚಿಮಾತ್ಯ ದೇಶಗಳ ಎಚ್ಚರಿಕೆಯನ್ನು ತಳ್ಳಿಹಾಕಿದ ಅವರು, ಚೀನಾವನ್ನು ಗುರಿಯಾಗಿಸಿಕೊಂಡ ʼಅನಗತ್ಯ, ಆಧಾರರಹಿತ ಆರೋಪ, ನಿರ್ಬಂಧ ಹಾಗೂ ಬೆದರಿಕೆಯನ್ನು' ಒಪ್ಪಲಾಗದು ಎಂದು ಹೇಳಿದ್ದಾರೆ.