ಮತ್ತೆ ನ್ಯಾಯಾಲಯದ ವಿಚಾರಣೆ ತಪ್ಪಿಸಿಕೊಂಡ ಇಮ್ರಾನ್ ಖಾನ್

ಇಸ್ಲಮಾಬಾದ್, ಮಾ.7: ತೋಷಖಾನಾ ಪ್ರಕರಣದಲ್ಲಿ 4ನೇ ಬಾರಿಗೆ ನ್ಯಾಯಾಲಯದ ವಿಚಾರಣೆಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಗೈರುಹಾಜರಾಗಿದ್ದಾರೆ . ಈ ಮಧ್ಯೆ, ಇಮ್ರಾನ್ ವಿರುದ್ಧದ ಜಾಮೀನುರಹಿತ ಬಂಧನ ಆದೇಶವನ್ನು ರದ್ದುಗೊಳಿಸಲು ಇಸ್ಲಮಾಬಾದ್ ಕೋರ್ಟ್ ನಿರಾಕರಿಸಿದೆ ಎಂದು ವರದಿಯಾಗಿದೆ.
70 ವರ್ಷದ ಇಮ್ರಾನ್‍ಖಾನ್ ತೀವ್ರ ಅಸ್ವಸ್ಥಗೊಂಡಿರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದ್ದರಿಂದ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಬೇಕು ಎಂದು ಇಮ್ರಾನ್ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡುವಂತೆ ಪಾಕ್ ಚುನಾವಣಾ ಆಯೋಗದ ಪ್ರತಿನಿಧಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಆದರೆ ಅಂದು ಇಮ್ರಾನ್‍ಖಾನ್ ಕಡ್ಡಾಯವಾಗಿ ಹಾಜರಿರುವಂತೆ ನಿರ್ದೇಶಿಸಬೇಕು ಎಂದು ಪಾಕಿಸ್ತಾನ್ ಮುಸ್ಲಿಂಲೀಗ್ -ನವಾಝ್ ಪಕ್ಷದ ಮುಖಂಡ ಮೊಹ್ಸಿನ್ ಶಹನವಾಝ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.
ಬಳಿಕ ಟ್ವೀಟ್ ಮಾಡಿರುವ ಇಮ್ರಾನ್‍ಖಾನ್ `ಪ್ರಧಾನಿ ಶಹಬಾಝ್ ಶರೀಫ್ ಸರಕಾರ ತನ್ನ ವಿರುದ್ಧ 76 ಕಾನೂನು ಪ್ರಕರಣ ದಾಖಲಿಸಿದೆ' ಎಂದಿದ್ದಾರೆ. ಬುದ್ಧಿವಂತಿಕೆ ಮತ್ತು ನೈತಿಕತೆ ಇಲ್ಲದವರು ರಾಷ್ಟ್ರದ ಮೇಲೆ ಅಪರಾಧಿಗಳ ಗುಂಪನ್ನು ಹೇರಿದಾಗ ಇಂತದ್ದೆಲ್ಲಾ ನಡೆಯುತ್ತದೆ ಎಂದವರು ಟ್ವೀಟ್ ಮಾಡಿದ್ದಾರೆ.





