ಕಡೂರು: ಕಂದಾಯ ಅಧಿಕಾರಿ, ಗುಮಾಸ್ತ ಲೋಕಾಯುಕ್ತ ಬಲೆಗೆ

ಚಿಕ್ಕಮಗಳೂರು, ಮಾ.7: ರೈತರೊಬ್ಬರ ಜಮೀನಿನ ಪೌತಿ ಖಾತೆ ಮಾಡಿಕೊಡಲು 8 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪುರಸಭೆಯ ಕಂದಾಯ ಅಧಿಕಾರಿ ಹಾಗೂ ಗುಮಾಸ್ತನನ್ನು ವಶಕ್ಕೆ ಪಡೆದಿರುವ ಘಟನೆ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಮಂಗಳವಾರ ವರದಿಯಾಗಿದೆ.
ಬೀರೂರು ಪುರಸಭೆಯ ಕಂದಾಯ ಅಧಿಕಾರಿ ಯೋಗೀಶ್ ಹಾಗೂ ಗುಮಾಸ್ತ ತಮ್ಮಯ್ಯ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾದ ಆರೋಪಿಗಳಾಗಿದ್ದು, ಈ ಅಧಿಕಾರಿಗಳು ಬೀರೂರಿನ ರೈತರೊಬ್ಬರ ಜಮೀನಿನ ಪೌತಿ ಖಾತೆ ಮಾಡಲು 8 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೇ ಲಂಚದ ಹಣವನ್ನು ಶೀಘ್ರ ನೀಡಬೇಕೆಂದು ರೈತನನ್ನು ಸತಾಯಿಸುತ್ತಿದ್ದರು. ಇದರಿಂದ ಬೇಸತ್ತ ರೈತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.
ರೈತ ನೀಡಿದ ದೂರಿನ ಮೇರೆಗೆ ಮಂಗಳವಾರ ಪುರಸಭೆ ಕಚೇರಿಯಲ್ಲಿ ಅಧಿಕಾರಿಗಳಿಬ್ಬರು ರೈತನಿಂದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 8 ಸಾವಿರ ನಗದು ಸಹಿತ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆ ಆರಂಭಿಸಿದ್ದಾರೆಂದು ತಿಳಿದು ಬಂದಿದೆ.
ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್, ಪಿಎಸ್ಸೈ ಅನಿಲ್ ರಾಥೋಡ್ ದಾಳಿಯ ನೇತೃತ್ವ ವಹಿಸಿದ್ದರು.







