ಭಾರತೀಯ ನೌಕಾಪಡೆ ಐಎನ್‌ಎಸ್ ವಿಶಾಖಪಟ್ಟಣಂನಿಂದ ನಡೆಸಿದ ಕ್ಷಿಪಣಿ ಪರೀಕ್ಷೆ ಯಶಸ್ವಿ

ಹೊಸದಿಲ್ಲಿ, ಮಾ. 7: ಭಾರತೀಯ ನೌಕಾ ಪಡೆ ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿ (ಎಂಆರ್‌ಎಸ್‌ಎಎಂ)ಯನ್ನು ಐಎನ್‌ಎಸ್ ವಿಶಾಖಪಟ್ಟಣಂನಿಂದ ಮಂಗಳವಾರ ಯಶಸ್ವಿಯಾಗಿ ಪರೀಕ್ಷಿಸಿದೆ. ಎಂಆರ್‌ಎಸ್‌ಎಎಂ ಗುರಿಯನ್ನು ನಿಖರವಾಗಿ ತಲುಪಿದೆ. ಎಂಆರ್‌ಎಸ್‌ಎಎಂ ಹಡಗು ವಿರೋಧಿ ಕ್ಷಿಪಣಿಯಾಗಿದ್ದು, ಶತ್ರು ಹಡಗುಗಳನ್ನು ನಿಮಿಷಗಳಲ್ಲಿ ಹೊಡೆದುರುಳಿಸುವ ಶಕ್ತಿ ಹೊಂದಿದೆ.
ಎಂಆರ್‌ಎಸ್‌ಎಎಂ ಅನ್ನು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ), ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ಜಂಟಿಯಾಗಿ ಅಭಿವೃದ್ಧಿಗೊಳಿಸಿದೆ. ಇದು ನೌಕಾ ಪಡೆಯ ಆತ್ಮ ನಿರ್ಭರದ ಕುರಿತ ಬದ್ಧತೆಯನ್ನು ಪ್ರತಿಬಿಂಬಿಸಿದೆ ಎಂದು ಭಾರತೀಯ ನೌಕಾ ಪಡೆ ತಿಳಿಸಿದೆ.
ಶತ್ರುಗಳ ಸರಿಯಾದ ಮಾಹಿತಿ ಪಡೆಯಲು ಯುದ್ಧ ನಿರ್ವಹಣಾ ವ್ಯವಸ್ಥೆಗಳಾದ ರಾಡಾರ್ ಸಿಸ್ಟಮ್, ಮೊಬೈಲ್ ಲಾಂಚರ್ ಸಿಸ್ಟಮ್, ಅಡ್ವಾನ್ಸ್ಡ್ ಲಾಂಗ್ ರೇಂಜ್ ರಾಡರ್, ರಿಲೋಡರ್ ವೆಹಿಕಲ್ ಮತ್ತು ಫೀಲ್ಡ್ ಸರ್ವೀಸ್ ವೆಹಿಕಲ್ ಇತ್ಯಾದಿಗಳನ್ನು ಇದರಲ್ಲಿ ಸೇರಿಸಲಾಗಿದೆ ಎಂದು ನೌಕಾ ಪಡೆ ತಿಳಿಸಿದೆ.
ಎಂಆರ್‌ಎಸ್‌ಎಎಂ ಅನ್ನು ಸೆಪ್ಟಂಬರ್ 2021ರಲ್ಲಿ ಐಎಎಫ್ ಫ್ಲೀಟ್‌ಗೆ ಸೇರಿಸಲಾಯಿತು. ಈ ಕ್ಷಿಪಣಿಯ ವಿಶೇಷತೆ ಏನೆಂದರೆ 360 ಡಿಗ್ರಿ ಸುತ್ತುವ ಮೂಲಕ ಗಾಳಿಯಲ್ಲಿ ಬರುವ ಬಹು ಗುರಿ ಅಥವಾ ಶತ್ರಗುಳ ಮೇಲೆ ಏಕ ಕಾಲದಲ್ಲಿ ದಾಳಿ ಮಾಡಬಲ್ಲದು. ಈ ಕ್ಷಿಪಣಿಯು 70 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಯಾವುದೇ ಕ್ಷಿಪಣಿ, ಯುದ್ಧ ವಿಮಾನ, ಹೆಲಿಕಾಪ್ಟರ್, ಡ್ರೋನ್, ಕಣ್ಗಾವಲು ವಿಮಾನ, ವೈಮಾನಿಕ ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.







