ಕಿರುಕುಳ ಆರೋಪ: ಸಿಎಸ್‌ಐ, ಕೆಎಸ್‌ಡಿ ಸಭಾಪ್ರಾಂತದ ಖಜಾಂಚಿ ಸೇರಿ 6 ಮಂದಿಯ ವಿರುದ್ಧ ದೂರು

ಮಂಗಳೂರು, ಮಾ.7: ಮಂಗಳೂರಿನ ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾಪ್ರಾಂತದ ಕಚೇರಿಯಲ್ಲಿ ಬಿಷಪ್ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯೊಬ್ಬರು, ಸಂಸ್ಥೆಯ ಖಜಾಂಜಿ ಹಾಗೂ ಕಾನೂನು ಸಲಹೆಗಾರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಮಾತ್ರವಲ್ಲದೆ, ಮೈಸೂರಿನ ಒಡನಾಡಿ ಸಂಸ್ಥೆಯ ನೆರವಿನಿಂದ ನಗರದ ಮಹಿಳಾ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಸ್‌ಐ , ಕೆಎಸ್‌ಡಿ ಸಭಾ ಪ್ರಾಂತ ಕಚೇರಿ ಯಲ್ಲಿ ಕಳೆದ 10 ವರ್ಷಗಳಿಂದ ಖಾಯಂ ಉದ್ಯೋಗಿಯಾಗಿದ್ದೇನೆ. ಈ ಹಿಂದಿನ ಬಿಷಪ್ ನಿವೃತ್ತರಾದ ಬಳಿಕ ಸಿಎಸ್‌ಐ ಸಭಾಪ್ರಾಂತ್ಯದಲ್ಲಿ ಕೆಲ ಕಾಲ ಬಿಷಪ್ ಇರಲಿಲ್ಲ. ಈ ವೇಳೆ ಸಂಸ್ಥೆಯ ಖಜಾಂಚಿ ಹಾಗೂ ಕಾನೂನು ಸಲಹೆಗಾರರು ವಿವಿಧ ರೀತಿಯಲ್ಲಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಕಳೆದ 9 ತಿಂಗಳುಗಳಿಂದ ವೇತನವನ್ನು ತಡೆ ಹಿಡಿದಿದ್ದಾರೆ. ನಾನು ಕರ್ತವ್ಯ ನಿರ್ವಹಿಸುವ ಕೊಠಡಿಗೆ ಬೀಗ ಹಾಕಿ 6 ತಿಂಗಳುಗಳಿಂದ ಉದ್ಯೋಗದಿಂದ ತೆಗೆಯುವ ಹುನ್ನಾರ ನಡೆಸಿದ್ದಾರೆ. ಮಾತ್ರವಲ್ಲದೆ, ಅಪಪ್ರಚಾರ ಮಾಡಿ ಚಾರಿತ್ರ್ಯವಧೆ ಮಾಡುವ ಪ್ರಯತ್ನವನ್ನೂ ಮಾಡಿದ್ದಾರೆ ಎಂದು ದೂರಿದ್ದಾರೆ.
ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಇದುವರೆಗೆ ಸುಮ್ಮನಿದ್ದೆ. ಈಗ ಒಡನಾಡಿ ಸಂಸ್ಥೆಯವರು ಸ್ಥೆರ್ಯ ತುಂಬಿದ್ದರಿಂದ ಈ ಬಗ್ಗೆ ದೂರು ನೀಡಿರುವುದಾಗಿ ಮಹಿಳೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಸ್ಥೆಯ ಖಜಾಂಚಿ 2017ರ ಅಕ್ಟೋಬರ್‌ನಿಂದಲೂ ಕಿರುಕುಳ ನೀಡಲಾರಂಭಿಸಿದ್ದರು. ಈ ಬಗ್ಗೆ ಬಿಷಪ್ ಅವರಿಗೂ ದೂರು ನೀಡಿರುವುದಾಗಿ ಮಹಿಳೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲು
ನೊಂದ ಮಹಿಳೆ ನೀಡಿರುವ ದೂರಿನಂತೆ ಮಹಿಳಾ ಠಾಣೆ ಪೊಲೀಸರು 6 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರಿನ ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾಪ್ರಾಂತದ ಕಚೇರಿಯ ಖಜಾಂಚಿ ವಿನ್ಸೆಂಟ್ ಪಾಲನ್ಹಾ, ಕಾನೂನು ಸಲಹೆಗಾರ ಫಾ. ನೋಯಲ್ ಕರ್ಕಡ, ಉಪಾಧ್ಯಕ್ಷೆ ಸುಜತಾ, ಕಾರ್ಯದರ್ಶಿ ಡಿ.ವಿಲಿಯಂ ಕೇರಿ, ಕರುಣಾಕರ ಕುಂದರ್, ಮನೋಹರ ಅಮ್ಮಣ್ಣ ವಿರುದ್ಧ ದೂರು ದಾಖಲಾಗಿದೆ.