ತುಮಕೂರು: ದೇವರಾಯನ ದುರ್ಗ ಜಾತ್ರೆಯ ಸಂಭ್ರಮದ ನಡುವೆ ಇಬ್ಬರು ಮೃತ್ಯು

ತುಮಕೂರು, ಮಾ.7: ದೇವರಾಯನ ದುರ್ಗ ಜಾತ್ರೆಯ ಸಂಭ್ರಮದ ನಡುವೆ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿರುವುದು ವರದಿಯಾಗಿದೆ.
ಜಾತ್ರೆಯಲ್ಲಿ ಪಾಲ್ಗೊಳ್ಳಲು ಕೊರಟಗೆರೆ ತಾಲೂಕಿನ ಇರಕಸಂದ್ರದ ಬಾಲಕಿ ಮಾನಸ ಬೆಟ್ಟ ಹತ್ತುತ್ತಿರಬೇಕಾದರೆ, ಆಕಸ್ಮಿಕ ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಶೇ.90ರಷ್ಟು ಸಜೀವ ದಹನ ಗೊಂಡಿದ್ದು, ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಬೆಂಕಿ ಆಕಸ್ಮಿಕದಲ್ಲಿ ವೃದ್ಧೆಯೊಬ್ಬರ ಕೈಗೆ ಬೆಂಕಿ ತಗುಲಿದ್ದು, ಇಬ್ಬರು ಬಾಲಕಿಯರು ಬೆಂಕಿಯಿಂದ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದ ನಂತರ ತೀರ್ಥ ಸೇವಿಸಲು ಬಂದ 28 ವರ್ಷದ ಯುವಕ ಹೃದಯಾಘಾತಕ್ಕೆ ಒಳಗಾಗಿ ದೇಗುಲದ ಪ್ರಾಂಗಣದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ರಾಹುಲ್ ಕುಮಾರ್ ಶಹಪೂರವಾಡ್, ಸರ್ಕಲ್ ಇನ್‌ಸ್ಪೆಕ್ಟರ್ ಚನ್ನೇಗೌಡ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮೃತ ದೇಹಗಳನ್ನು ಸರಕಾ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







