ಶಾರಿಕ್ ನನ್ನು ಶಿವಮೊಗ್ಗಕ್ಕೆ ಕರೆತಂದ NIA: ಸ್ಥಳ ಮಹಜರು

ಶಿವಮೊಗ್ಗ, ಮಾ.8: ಮಂಗಳೂರಿನ ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರಿಕ್ ನನ್ನು NIA ತಂಡವು ಮಂಗಳವಾರ ಶಿವಮೊಗ್ಗಕ್ಕೆ ಕರೆತಂದು ಸ್ಥಳ ಮಹಜರು ನಡೆಸಿರುವುದಾಗಿ ವರದಿಯಾಗಿದೆ. ಈತನ ಜೊತೆ ಶಿವಮೊಗ್ಗದ ಪ್ರೇಮಚಂದ್ ಚಾಕು ಇರಿತ ಪ್ರಕರಣದಲ್ಲಿ ಬಂಧಿತ ಆರೋಪಿ ಜಬೀವುಲ್ಲಾನನ್ನೂ NIA ತಂಡ ಕರೆದುಕೊಂಡು ಬಂದಿದ್ದು, ಸ್ಥಳ ಮಹಜರು ನಡೆಸಿದೆ.
ಇವರಿಬ್ಬರು ಶಿವಮೊಗ್ಗ ತುಂಗಾ ನದಿ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ಶಿವಮೊಗ್ಗ ಸರಕಾರಿ ಬಸ್ ನಿಲ್ದಾಣ ಮತ್ತು ಅದರ ಬಳಿ ಇರುವ ಬ್ರೈಟ್ ಹೊಟೇಲ್ ಬಳಿ ಕರೆದೊಯ್ದು ಮಹಜರು ನಡೆಸಿದ್ದಾರೆ.
ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದ ಶಾರೀಕ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ಇದೀಗ ಸಂಪೂರ್ಣ ಗುಣಮುಖ ಆಗಿರುವುದರಿಂದ ಶಾರಿಕ್ ನನ್ನು ಸೋಮವಾರ ಬೆಂಗಳೂರಿನ ವಿಶೇಷ ಎನ್ಐಎ ಕೋರ್ಟ್ ಮುಂದೆ ಹಾಜರುಪಡಿಸಿರುವ NIA ಆತನನ್ನು 10 ದಿನಗಳ ಕಸ್ಟಡಿಗೆ ಪಡೆದಿದೆ. ಅದರ ಬೆನ್ನಲ್ಲೆ NIA ಪ್ರಕರಣದ ತನಿಖೆ ಚುರುಕುಗೊಳಿಸಿದೆ.





