ಹರ್ಯಾಣ ಸಚಿವರ ವಿರುದ್ಧ ದೌರ್ಜನ್ಯ, ಜಾತಿ ನಿಂದನೆ ಆರೋಪ ಮಾಡಿದ ದಲಿತ ಮುನ್ಸಿಪಲ್ ಇಂಜಿನಿಯರ್

ಹೊಸದಿಲ್ಲಿ: ಹರ್ಯಾಣ ಅಭಿವೃದ್ಧಿ ಹಾಗೂ ಪಂಚಾಯತ್ ಸಚಿವ ದೇವೆಂದರ್ ಸಿಂಗ್ ಬಾಬ್ಲಿ ತನಗೆ ಜಾತಿ ನಿಂದನೆ ಮಾಡಿ, ದೌರ್ಜನ್ಯ ಎಸಗಿದ್ದಾರೆ ಎಂದು ದಲಿತ ಮುನ್ಸಿಪಲ್ ಇಂಜಿನಿಯರ್ ಆರೋಪಿಸಿದ್ದಾರೆ ಎಂದು "ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
ತೋಹಾನಾ ನಗರದ ಬಿದಾಯಿ ಖೇರಾ ಗ್ರಾಮದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಲು ಸಚಿವ ದೇವೇಂದ್ರ ಸಿಂಗ್ ಅವರು ರಮಣದೀಪ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಾಗ ಈ ಘಟನೆ ನಡೆದಿದೆ.
ಸ್ಥಳೀಯ ಗುತ್ತಿಗೆದಾರರಿಗೆ ಕೆಲವು ಪಾವತಿಗಳನ್ನು ನೀಡಲು ನಿರಾಕರಿಸಿದ ನಂತರ ದೇವೆಂದರ್ ಸಿಂಗ್ ಅವರು ಕುಳಿತಿದ್ದ ಕುರ್ಚಿಗೆ ಒದ್ದು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಮಣದೀಪ್ ಆರೋಪಿಸಿದ್ದಾರೆ. ಸಚಿವರು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ರಮಣದೀಪ್ ಅವರು ಫತೇಹಾಬಾದ್‌ನ ಜಿಲ್ಲಾ ಮುನ್ಸಿಪಲ್ ಕಮಿಷನರ್‌ಗೆ ನೀಡಿದ ದೂರಿನಲ್ಲಿ ನಿರ್ಮಾಣ ಕಾಮಗಾರಿಯಲ್ಲಿನ ಲೋಪಗಳ ಬಗ್ಗೆ ಮಾತನಾಡುವಾಗ ಸಚಿವರ ಸಹಾಯಕನೊಬ್ಬ ತಮ್ಮ ವಿರುದ್ಧ ಸಚಿವರನ್ನು ಪ್ರಚೋದಿಸಿದ್ದ ಎಂದು ಆರೋಪಿಸಿದ್ದಾರೆ.
ತನಗೆ ಜೀವ ಭಯವಿದ್ದು ತೋಹನಾದಿಂದ ವರ್ಗಾವಣೆ ಮಾಡುವಂತೆ ದೂರಿನಲ್ಲಿ ರಮಣದೀಪ್ ಒತ್ತಾಯಿಸಿದ್ದಾರೆ. ತನ್ನ ವರ್ಗಾವಣೆಯಾಗುವವರೆಗೂ "ಪ್ರತಿಭಟನೆಯ ಅಡಿಯಲ್ಲಿ ರಜೆಯಲ್ಲಿರುತ್ತೇನೆ" ಎಂದು ಅವರು ಪುರಸಭೆಯ ಆಯುಕ್ತರಿಗೆ ತಿಳಿಸಿದ್ದಾರೆ.







