ಶಾರುಖ್ ಖಾನ್ ಮನೆಗೆ ನುಗ್ಗಿದ್ದ ಇಬ್ಬರು 8 ಗಂಟೆಗಳ ಕಾಲ ಮೇಕಪ್ ರೂಂನಲ್ಲಿ ಅಡಗಿ ಕುಳಿತಿದ್ದರು: ಪೊಲೀಸರು

ಮುಂಬೈ: ಕಳೆದ ವಾರ ಇಲ್ಲಿನ ಬಾಲಿವುಡ್ ನಟ ಶಾರುಖ್ ಖಾನ್(Shah Rukh Khan) ಅವರ ಬಂಗಲೆಯೊಳಗೆ ಅತಿಕ್ರಮ ಪ್ರವೇಶ ಮಾಡಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಈ ಇಬ್ಬರು ಸಿಕ್ಕಿಬೀಳುವ ಮೊದಲು ಸುಮಾರು ಎಂಟು ಗಂಟೆಗಳ ಕಾಲ ನಟನ ಮೇಕಪ್ ಕೊಠಡಿಯೊಳಗೆ ಅಡಗಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶಾರುಖ್ ಬಂಗ್ಲೆಯೊಳಗೆ ನುಸುಳಿದವರನ್ನು ಪಠಾಣ್ ಸಾಹಿಲ್ ಸಲೀಂ ಖಾನ್ ಹಾಗೂ ರಾಮ್ ಸರಾಫ್ ಕುಶ್ವಾಹ ಎಂದು ಗುರುತಿಸಲಾಗಿದೆ. ತಾವಿಬ್ಬರು 'ಪಠಾಣ್' ಚಿತ್ರದ ಸ್ಟಾರ್ ನ್ನು ಭೇಟಿಯಾಗಲು ಗುಜರಾತ್‌ನ ಭರೂಚ್‌ನಿಂದ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಈ ಇಬ್ಬರನ್ನು ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಅತಿಕ್ರಮ ಪ್ರವೇಶ ಹಾಗೂ ಸಂಬಂಧಿತ ಅಪರಾಧಗಳ ಪ್ರಕರಣವನ್ನು ದಾಖಲಿಸಲಾಗಿದೆ ಹಾಗೂ ತನಿಖೆ ಮುಂದುವರೆದಿದೆ.
ಆರೋಪಿಗಳು ನಟನ ಬಂಗಲೆಯಾದ ಮನ್ನತ್‌ನ ಮೂರನೇ ಮಹಡಿಯಲ್ಲಿರುವ ಮೇಕಪ್ ರೂಮ್‌ನಲ್ಲಿ ಬಚ್ಚಿಟ್ಟುಕೊಂಡಿದ್ದರು ಹಾಗೂ ಅವರನ್ನು ನೋಡಿದಾಗ ನಟ ಆಘಾತಕ್ಕೊಳಗಾಗಿದ್ದರು.
"ಇಬ್ಬರೂ ಆರೋಪಿಗಳು ಶಾರುಖ್ ರನ್ನು ಭೇಟಿಯಾಗಲು ಖಾನ್ ಅವರ ಬಂಗಲೆಗೆ ನುಸುಳಿದರು ಮತ್ತು ಸುಮಾರು ಎಂಟು ಗಂಟೆಗಳ ಕಾಲ ಅವರ ಮೇಕಪ್ ಕೋಣೆಯಲ್ಲಿ ನಟನಿಗಾಗಿ ಕಾಯುತ್ತಿದ್ದರು. ಅವರು ಸುಮಾರು ಬೆಳಗ್ಗೆ 3 ಗಂಟೆಗೆ ಪ್ರವೇಶಿಸಿದ್ದರು ಹಾಗೂ ಮರುದಿನ ಬೆಳಿಗ್ಗೆ 10:30 ಕ್ಕೆ ಸಿಕ್ಕಿಬಿದ್ದರು" ಎಂದು ಪೊಲೀಸರು ಹೇಳಿದರು.