ಬೆಳಗಾವಿ: ಡಿಸಿ ಕಚೇರಿಯಲ್ಲೇ ಮೂವರು ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಬೆಳಗಾವಿ, ಮಾ. 3: ಜಿಲ್ಲಾಧಿಕಾರಿ ಕಚೇರಿಯಲ್ಲೇ ಮಹಿಳೆಯೊಬ್ಬರು ಮೂವರು ಹೆಣ್ಣುಮಕ್ಕಳಿಗೆ ಫಿನೈಲ್ ಕುಡಿಸಿ ತಾವೂ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ವರದಿಯಾಗಿದೆ.
ಜಿಲ್ಲೆಯ ಬೈಲಹೊಂಗಲ ಜನತಾ ಪ್ಲ್ಯಾಟ್ ನಿವಾಸಿ 40 ವರ್ಷದ ಸರಸ್ವತಿ ಎಂಬುವರು ತನ್ನ ಮೂವರು ಹೆಣ್ಣುಮಕ್ಕಳಾದ 14 ವರ್ಷದ ಸೃಷ್ಟಿ, 8 ವರ್ಷದ ಸಾಕ್ಷಿ ಮತ್ತು 3 ವರ್ಷದ ಸಾನ್ವಿಗೆ ಫಿನೈಲ್ ಕುಡಿಸಿ ನಂತರ ತಾನೂ ಫಿನೈಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ ನಾಲ್ವರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಸದ್ಯ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸರಸ್ವತಿ ಪತಿ ಅದೃಶ್ಯಪ್ಪ ಬೆಳಗಾವಿಯ ಅನಗೋಳದಲ್ಲಿ ಸಲೂನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದರು. ಅದೃಶ್ಯಪ್ಪ ಹಲವು ಕಡೆ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೇ ಅದೃಶ್ಯಪ್ಪ 15 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಾನೆನ್ನಲಾಗಿದೆ. ಇದರಿಂದ ಜೀವನ ನಿರ್ವಣೆಗೆ ಕಷ್ಟವಾದ ಕಾರಣ ಸರಸ್ವತಿ ಅವರು ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಬುಧವಾರ ಜಿಲ್ಲಾಧಿಕಾರಿಗಳ ಭೇಟಿಗೆ ಆಗಮಿಸಿದ್ದರು. ಆದರೆ, ಕಚೇರಿಯಲ್ಲಿ ಜಿಲ್ಲಾಧಿಕಾರಿ ಇರಲಿಲ್ಲ. ಆದರೆ ಅದಕ್ಕೂ ಮೊದಲೇ ಜ್ಯೂಸ್ ಎಂದು ಮಕ್ಕಳಿಗೆ ಫಿನೈಲ್ ಕುಡಿಸಿದ್ದರಿಂದ ನಾಲ್ವರು ಅಸ್ವಸ್ಥರಾಗಿದ್ದರು. ಇದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.







