ಏಷ್ಯಾನೆಟ್ ಕಚೇರಿಗಳಿಗೆ ಅಗತ್ಯವಿದ್ದರೆ ಪೊಲೀಸ್ ರಕ್ಷಣೆ ಒದಗಿಸುವಂತೆ ಕೇರಳ ಹೈಕೋರ್ಟ್ ಸೂಚನೆ

ತಿರುವನಂತಪುರಂ: ಮಲಯಾಳಂ ಸುದ್ದಿವಾಹಿನಿ ಏಷ್ಯಾನೆಟ್ (Asianet) ವಿರುದ್ಧದ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ತಾಳಿದರೆ ಚಾನಲ್ ಕಚೇರಿಗಳಿಗೆ ರಕ್ಷಣೆಯೊದಗಿಸಬೇಕು ಎಂದು ಕೇರಳ ಹೈಕೋರ್ಟ್ (Kerala High Court) ಇಂದು ಪೊಲೀಸರಿಗೆ ಸೂಚನೆ ನೀಡಿದೆ.
ಕೇರಳದ ಆಡಳಿತ ಸಿಪಿಐ(ಎಂ) ಇದರ ವಿದ್ಯಾರ್ಥಿ ಘಟಕವಾಗಿರುವ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯಕರ್ತರು ಮಾರ್ಚ್ 3 ರಂದು ಎರ್ಣಾಕುಳಂನಲ್ಲಿರುವ ಏಷ್ಯಾನೆಟ್ ನ್ಯೂಸ್ ಕಚೇರಿಗೆ ನುಗ್ಗಿ ಅಲ್ಲಿನ ಸಿಬ್ಬಂದಿಗೆ ಬೆದರಿಸಿದ ಘಟನೆ ನಡೆದ ನಂತರ ಏಷ್ಯಾನೆಟ್ ನ್ಯಾಯಾಲಯದ ಮೊರೆ ಹೋಗಿತ್ತು.
ಮಾದಕ ದ್ರವ್ಯ ವ್ಯಸನ ಮತ್ತು ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಏಷ್ಯಾನೆಟ್ ಪ್ರಸಾರ ಮಾಡಿದ್ದ ವರದಿಯೊಂದನ್ನು ವಿರೋಧಿಸಿ ಎಸ್ಎಫ್ಐ ಪ್ರತಿಭಟನೆ ನಡೆಸಿತ್ತು.
ಹತ್ತು ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅಪ್ರಾಪ್ತೆಯೊಬ್ಬಳ ಹೇಳಿಕೆಯನ್ನಾಧರಿಸಿ ಸುದ್ದಿ ವಾಹಿನಿಯು ಸುಳ್ಳು ಆರೋಪಗಳನ್ನು ಹೊರಿಸಿದೆ ಎಂದು ಸಿಪಿಐ(ಎಂ) ಶಾಸಕ ಪಿ ವಿ ಅನ್ವರ್ ಆರೋಪಿಸಿ ದೂರು ನೀಡಿದ್ದರು.
ಈ ದೂರನ್ನಾಧರಿಸಿ ಕೇರಳ ಪೊಲೀಸರು ರವಿವಾರ ಏಷ್ಯಾನೆಟ್ ಕಚೇರಿಯ್ಲಲಿ ಶೋಧ ಕಾರ್ಯಾಚರಣೆ ನಡೆಸಿದ್ದರು.
ಈ ಘಟನೆ ರಾಜಕೀಯ ಬಣ್ಣ ಪಡೆದಿದೆ ಹಾಗೂ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾತ್ಮಕವಾಗುವ ಸಾಧ್ಯತೆಯಿರಬಹುದು. ಹಾಗಾದಲ್ಲಿ ಅರ್ಜಿದಾರರ ಕೊಚ್ಚಿ, ಕೊಝಿಕ್ಕೋಡ್, ಕಣ್ಣೂರು ಮತ್ತು ತಿರುವನಂತಪುರಂ ಕಚೇರಿಗಳಿಗೆ ಸೂಕ್ತ ರಕ್ಷಣೆಯೊದಗಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಶುಕ್ರವಾರದ ಘಟನೆ ಬಳಿಕ ಯಾವುದೇ ಬೆದರಿಕೆಗಳು ಬಂದಿವೆಯೇ ಎಂದೂ ನ್ಯಾಯಾಲಯವು ಸುದ್ದಿ ಸಂಸ್ಥೆಯನ್ನು ಕೇಳಿದಾಗ ಪ್ರತಿಕ್ರಿಯಿಸಿದ ಅದರ ವಕೀಲರು, ದೂರವಾಣಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಬ್ಬರದ ಸಂಗೀತಕ್ಕೆ ಆಕ್ಷೇಪ: ಪಂಜಾಬ್ ನಲ್ಲಿ ಕೆನಡಾ ಪ್ರಜೆಯ ಥಳಿಸಿ ಹತ್ಯೆ







