ಆತ್ಮಹತ್ಯೆ ಅಲ್ಲದೆ ಬೇರೆ ಯಾವ ದಾರಿ ಉಳಿದಿದೆ?: ಬೆಲೆ ಕುಸಿತದಿಂದ ಕಂಗಾಲಾಗಿರುವ ಈರುಳ್ಳಿ ಬೆಳೆಗಾರರ ಪ್ರಶ್ನೆ
ಬೆಲೆ ಕುಸಿತಕ್ಕೆ ಕಾರಣವೇನು?

ನಾಶಿಕ್: ಈರುಳ್ಳಿ (Onion) ಬೆಲೆಗಳ ಕುಸಿತದಿಂದ ಮಹಾರಾಷ್ಟ್ರದ (Maharashtra) ಬೆಳೆಗಾರರು ಕಂಗಾಲಾಗಿದ್ದು, ಸರಕಾರ ತಮ್ಮ ಸಹಾಯಕ್ಕೆ ಬರುತ್ತಿಲ್ಲವೆಂದು ಅಸಮಾಧಾನ ಹೊಂದಿರುವ ಹಲವು ಬೆಳೆಗಾರರು ʻʻಆತ್ಮಹತ್ಯೆ ಮಾಡಿಕೊಳ್ಳುವುದಲ್ಲದೆ ನಮಗೆ ಬೇರೆ ಯಾವ ದಾರಿ ಉಳಿದಿದೆ?" ಎಂದು ಅಲವತ್ತುಕೊಳ್ಳುತ್ತಿದ್ದಾರೆ ಎಂದು theprint.in ವರದಿ ಮಾಡಿದೆ.
ಹೋಳೀ ಹಬ್ಬದ ದಿನ ಮುಂಜಾನೆ ನಾಶಿಕ್ ಜಿಲ್ಲೆಯ ರೈತರೊಬ್ಬರು ಬೆಲೆ ಕುಸಿತದಿಂದ ಕಂಗೆಟ್ಟು ತಾವು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದ 150 ಕ್ವಿಂಟಾಲ್ ಈರುಳ್ಳಿಯನ್ನು ತಮ್ಮ ಕುಟುಂಬ ಸದಸ್ಯರೆದುರು ಸುಟ್ಟು ಹಾಕಿದ್ದಾರೆ.
ಈ ರೈತ ಕೃಷ್ಣ ಡೋಂಗ್ರೆ ತಮ್ಮ ಕಷ್ಟ ವಿವರಿಸಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ರಕ್ತದಲ್ಲಿ ಪತ್ರ ಬರೆದಿದ್ದರೂ ಸ್ಪಂದನೆ ದೊರಕಿಲ್ಲ ಎಂದು ದೂರಲಾಗಿದೆ.
ಫೆಬ್ರವರಿ 4ರ ತನಕ ನಾಶಿಕ್ನಲ್ಲಿ ಈರುಳ್ಳಿ ಬೆಲೆ ಕ್ವಿಂಟಾಲಿಗೆ ರೂ 1,151 ಆಗಿದ್ದರೆ, ಫೆಬ್ರವರಿ ಅಂತ್ಯದ ವೇಳೆಗೆ ಕ್ವಿಂಟಾಲಿಗೆ ರೂ. 550 ರಷ್ಟು ಇಳಿಕೆ ಉಂಟಾಗಿತ್ತು. ಸದ್ಯ ಕ್ವಿಂಟಾಲಿಗೆ ರೂ 700 ರಷ್ಟಿದೆ.
ಬೆಲೆ ಕುಸಿತಕ್ಕೆ ಕಾರಣವೇನು?
ವರ್ತಕರು ಮತ್ತು ಎಪಿಎಂಸಿ ಆಡಳಿತದ ಪ್ರಕಾರ ತಾಪಮಾನದಲ್ಲಿ ದಿಢೀರ್ ಬದಲಾವಣೆ ಮತ್ತು ನೆರೆಯ ದೇಶಗಳಿಂದ ಆಮದು ಸುಂಕಗಳಲ್ಲಿ ಏರಿಕೆ ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಕೆಂಪು ಈರುಳ್ಳಿ ಗುಣಮಟ್ಟವೂ ಚೆನ್ನಾಗಿಲ್ಲದೇ ಇರುವುದು ಬೆಲೆ ಕುಸಿತಕ್ಕೆ ಕಾರಣವಾಗಿರಬಹುದು ಎಂದು ಕೆಲ ಬೆಳೆಗಾರರು ಹೇಳುತ್ತಾರೆ.
ನಾಶಿಕ್ನ ಲಸಲಗಾಂವ್ ಎಪಿಎಂಸಿ ಅಂಕಿಅಂಶಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿಯೇ ಈ ವರ್ಷದ ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಗರಿಷ್ಠ ಪ್ರಮಾಣದ ಈರುಳ್ಳಿ ಬಂದಿದೆ. ಈ ತಿಂಗಳು 11.64 ಲಕ್ಷ ಕ್ವಿಂಟಾಲ್ ಈರುಳ್ಳಿ ಫೆಬ್ರವರಿಯಲ್ಲಿ ಬಂದಿದ್ದರೆ ಕಳೆದ ವರ್ಷ 8.97 ಲಕ್ಷ ಕ್ವಿಂಟಾಲ್ ಮತ್ತು 2018-19 ರಲ್ಲಿ 10 ಲಕ್ಷ ಕ್ವಿಂಟಾಲ್ ಈರುಳ್ಳಿ ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಬಂದಿತ್ತು.
ಭಾರತದ ಶೇ 40 ರಷ್ಟು ಈರುಳ್ಳಿ ಉತ್ಪತ್ತಿ ಮಹಾರಾಷ್ಟ್ರದಲ್ಲಾಗುತ್ತಿದೆ. ಇಲ್ಲಿ ಬೆಳೆಸಲಾಗುವ 25 ರಿಂದ 26 ಮಿಲಿಯನ್ ಟನ್ ಈರುಳ್ಳಿಯ ಪೈಕಿ 1.5-1.6 ಮಿಲಿಯನ್ ಟನ್ ಈರುಳ್ಳಿ ರಫ್ತಾಗುತ್ತದೆ.
ಈರುಳ್ಳಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಸರಕಾರ ಮಧ್ಯಪ್ರವೇಶಿಸಿ ನಾಫೆಡ್ ಮೂಲಕ ಈರುಳ್ಳಿ ಖರೀದಿ ಆರಂಭಿಸಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಫೆಬ್ರವರಿ 28 ರಂದು ತಿಳಿಸಿದ್ದರು.
ಆದರೆ ನಾಫೆಡ್ ಈರುಳ್ಳಿ ಖರೀದಿಸುವುದರಿಂದ ಬೆಳೆಗಾರರಿಗೆ ಹೆಚ್ಚಿನ ಪ್ರಯೋಜನವಾಗದು ಎಂಬುದು ಹಲವರ ಅಭಿಪ್ರಾಯ.
ಇದನ್ನೂ ಓದಿ: ಏಷ್ಯಾನೆಟ್ ಕಚೇರಿಗಳಿಗೆ ಅಗತ್ಯವಿದ್ದರೆ ಪೊಲೀಸ್ ರಕ್ಷಣೆ ಒದಗಿಸುವಂತೆ ಕೇರಳ ಹೈಕೋರ್ಟ್ ಸೂಚನೆ







