ಲಂಕೇಶರ ಕತೆಗಳು ಸಮಾಜದಲ್ಲಿನ ಅಸಮಾನತೆಯನ್ನು ಹೇಳುತ್ತವೆ: ರಾಜೇಂದ್ರ ಚೆನ್ನಿ

ಬೆಂಗಳೂರು, ಮಾ.8: ಲಂಕೇಶರ ಕತೆಗಳು ಸಮಾಜದಲ್ಲಿನ ಅಸಮಾನತೆಯನ್ನು ತೋರುತ್ತದೆ. ಲಂಕೇಶರನ್ನು ಕನ್ನಡ ಕಂಡಂತಹ ಒಬ್ಬ ಗ್ರೀನ್ ಫಿನಾಮಿನನ್ ಎನ್ನಬಹುದು. ಅವರ ಕತೆಗಳ ಓದಿನ ಮೂಲಕ ಸಮಾಜದಲ್ಲಿ ನಾವು ಎಂತಹ ಮನುಷ್ಯನನ್ನು ಸೃಷ್ಟಿಸಬೇಕೆಂಬುದನ್ನು ತಿಳಿಯಬೇಕು ಎಂದು ವಿಮರ್ಶಕ ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.
ಬುಧವಾರ ನಗರದ ಚಾಮರಾಜಪೇಟೆಯಲ್ಲಿರುವ ಕಸಾಪದಲ್ಲಿ ನಡೆದ ಪಿ.ಲಂಕೇಶ್ ಸಮಗ್ರ ಕತೆಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಂಕೇಶರ ಕತೆಗಳಲ್ಲಿ ಕೌರ್ಯ, ಹಿಂಸೆ ಅನ್ನುವುದು ಕೇವಲ ಮನುಷ್ಯ ಸ್ವಭಾವವಾಗಿ ಕಾಣುವುದಿಲ್ಲ. ಅಲ್ಲಿನ ಕೌರ್ಯದ ಸಾಧ್ಯತೆಗಳಿಗೆ ಅವಕಾಶ ಸಿಗುತ್ತಿರುವುದು ಸಮಾಜದಲ್ಲಿನ ಅಸಮಾನತೆ, ಗಂಡಾಳ್ವಿಕೆ ಹಾಗೂ ಅಧಿಕಾರಶಾಹಿ ನಡವಳಿಕೆಗಳಿಂದ ಎಂದರು.
ಸಾಮಾಜಿಕ ಹೋರಾಟಗಾರ್ತಿ ಹಾಗೂ ಲೇಖಕಿ ಬಾನು ಮುಷ್ತಾಕ್ ಮಾತನಾಡಿ, ಲಂಕೇಶರು ಬದುಕಿದ್ದಂತಹ ಸಂದರ್ಭದಲ್ಲಿ ಅವರ ಕೃತಿಗಳ ವಿಮರ್ಶೆ ಆಗಿದ್ದಿದ್ದರೆ ಬಹುಶಃ ಅವರು ನಕ್ಕು ಖುದ್ದಾಗಿ ಎಲ್ಲವನ್ನೂ ಲೇವಡಿ ಮಾಡಿಬಿಡುತ್ತಿದ್ದರು ಎಂದ ಅವರು, ಲಂಕೇಶರು ಮತ್ತು ನನ್ನ ಒಡನಾಟ ಚರ್ಚೆ, ತಕರಾರು, ವಿಮರ್ಶೆಗಳಿಂದ ಕೂಡಿದ ಅವಿನಾಭಾವ ಸಂಬಂಧವಾಗಿತ್ತು ಎಂದರು.
ನನ್ನ ಬದುಕಿನಲ್ಲಿ ನಡೆದ ಕೆಲವು ಘಟನೆಗಳಿಂದ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಾಗ ಲಂಕೇಶ್ ಪತ್ರಿಕೆಯನ್ನು ಓದಲು ತೊಡಗಿದೆ. ಪತ್ರಿಕೆ ಬದುಕಿನಲ್ಲಿ ಹೆಚ್ಚು ಪರಿಣಾಮ ಬೀರಿತ್ತು. ನಾನು ಸಹ ಪತ್ರಿಕೆಗೆ ಲೇಖನಗಳನ್ನು ಬರೆಯಲು ಪ್ರಾರಂಭಿಸಿದೆ. ನನ್ನ ಬಹುತೇಕ ಲೇಖನಗಳು ಸಮಾಜದಲ್ಲಿ ವಿವಾದವನ್ನು ಸೃಷ್ಟಿಸಿದ್ದವು. ಇದರಿಂದ ಕೊಲೆ ಬೆದೆರಿಕೆಯೂ ಬಂದಿತ್ತು. ಆದರೆ ಲಂಕೇಶರು ನನಗೆ ಧೈರ್ಯ ಮತ್ತು ಶಕ್ತಿಯಾಗಿ ನಿಂತು ಬರವಣಿಗೆಗೆ ಮುಕ್ತ ಆಹ್ವಾನ ನೀಡಿದ್ದರು ಎಂದು ನೆನಪುಗಳನ್ನು ಮೆಲುಕು ಹಾಕಿದರು.
ಲೇಖಕಿ ಎಂ.ಎಸ್.ಆಶಾದೇವಿ ಮಾತನಾಡಿ, ನಮಗೆ ನವ್ಯ ಕಾಲಘಟ್ಟದಲ್ಲಿ ಅತ್ಯಂತ ಹೆಚ್ಚಿನ ಮಹಿಳಾ ಪರವಾದ ನಿಲುವು, ಅದಮ್ಯ ಸ್ತ್ರೀವಾದಿಯಾಗಿ ಲಂಕೇಶರು ಕಾಣಿಸಿಕೊಳ್ಳುತ್ತಾರೆ. ಅವರು ನವ್ಯಯುಗದ ಪ್ರಭಾವಿ ಸಾಹಿತಿಯಾಗಿಯೂ ಮೇರುಸ್ಥಾನದಲ್ಲಿ ನಿಲ್ಲುತ್ತಾರೆ. ಅವರ ಕೃತಿಗಳಲ್ಲಿ ಸ್ತ್ರೀ ದ್ವನಿ ಮಾರ್ಧನಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಲಂಕೇಶರ ಪತ್ನಿ ಇಂದಿರಾ ಲಂಕೇಶ್, ನಿರ್ದೇಶಕಿ ಕವಿತಾ ಲಂಕೇಶ್ ಸೇರಿದಂತೆ ಹಲವರು ಇದ್ದರು.