ಕಾನೂನು ಸವಾಲುಗಳ ಮಧ್ಯೆ ಪಾಕಿಸ್ತಾನದಲ್ಲಿ ಮಹಿಳೆಯರ ರ‍್ಯಾಲಿ

ಲಾಹೋರ್, ಮಾ.8: ಅಧಿಕಾರಿಗಳು ಭದ್ರತೆ ಒದಗಿಸಲು ನಿರಾಕರಿಸಿದ್ದರೂ ಎಲ್ಲಾ ಅಡೆತಡೆಗಳ ನಡುವೆಯೇ ಪಾಕಿಸ್ತಾನದ ಹಲವೆಡೆ ಅಂತರಾಷ್ಟ್ರೀಯ ಮಹಿಳಾ ದಿನದ ರ‍್ಯಾಲಿ ನಡೆದಿದೆ ಎಂದು ವರದಿಯಾಗಿದೆ.
ಈ ಹಿಂದಿನ ವರ್ಷಗಳಲ್ಲಿ ಮಹಿಳಾ ದಿನಾಚರಣೆಯ ರ‍್ಯಾಲಿಯಲ್ಲಿ ಪ್ರದರ್ಶಿಸುವ ಬ್ಯಾನರ್‍ಗಳಲ್ಲಿ `ವಿಚ್ಛೇದನ, ಲೈಂಗಿಕ ಕಿರುಕುಳ' ಮುಂತಾದ ವಿಷಯಗಳ ಬಗ್ಗೆ ಉಲ್ಲೇಖಿಸಿರುವುದು ವಿವಾದಕ್ಕೆ ಕಾರಣವಾಗಿತ್ತು. ಆದ್ದರಿಂದ ಈ ಬಾರಿಯ ರ‍್ಯಾಲಿಗೆ ಭದ್ರತೆಯನ್ನು ಒದಗಿಸಲು ಲಾಹೋರ್ ನಗರಾಡಳಿತ ನಿರಾಕರಿಸಿತ್ತು.
ಇದನ್ನು ಪ್ರಶ್ನಿಸಿ ರ‍್ಯಾಲಿಯ ಆಯೋಜಕರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಅರ್ಜಿಯ ಪರಿಶೀಲನೆ ನಡೆಸಿದ ನ್ಯಾಯಾಲಯ, ರ‍್ಯಾಲಿಗೆ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲು ಸೂಚಿಸಿದಾಗ, ಪ್ರತಿಭಟನೆಯನ್ನು ನಗರದ ಹೊರಭಾಗದಲ್ಲಿ ನಡೆಸಿದರೆ ಭದ್ರತೆ ಒದಗಿಸಬಹುದು ಎಂದು ಅಧಿಕಾರಿಗಳು ಹೇಳಿದ್ದರು. ಬುಧವಾರ ಲಾಹೋರ್ ನಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ 2 ಸಾವಿರಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು.
ಇಸ್ಲಮಾಬಾದಿನಲ್ಲೂ ಪ್ರತಿಭಟನಾ ರ‍್ಯಾಲಿ ನಡೆದಿದೆ .ಯುರೋಪ್, ಥೈಲ್ಯಾಂಡ್, ಸ್ಪೇನ್, ಅಮೆರಿಕ, ಥೈಲ್ಯಾಂಡ್, ಉಕ್ರೇನ್ ಸೇರಿದಂತೆ ವಿಶ್ವದಾದ್ಯಂತ ಮಹಿಳಾ ದಿನದ ರ‍್ಯಾಲಿ ನಡೆದಿರುವ ಬಗ್ಗೆ ವರದಿಯಾಗಿದೆ.