ತ್ರಿಪುರದಲ್ಲಿ ಬಿಜೆಪಿ ಭಯೋತ್ಪಾದನೆಯ ದುಷ್ಕೃತ್ಯ; ಸಿಪಿಎಂ ಖಂಡನೆ

ಬ್ರಹ್ಮಾವರ: ತ್ರಿಪುರ ರಾಜ್ಯದಲ್ಲಿ ಆಡಳಿತ ಪಕ್ಷವಾದ ಬಿಜೆಪಿ, ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೂ, ತನಗಾದ ಹಿನ್ನಡೆಯ ಹತಾಶೆಯಿಂದ ಫಲಿತಾಂಶದ ನಂತರ, ಸಿಪಿಎಂ ಹಾಗೂ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಹಾಗೂ ವಿರೋಧ ಪಕ್ಷಗಳ ಕಾರ್ಯಕರ್ತರ ಮೇಲೆ ಹಾಗೂ ಅವರ ಆಸ್ತಿಗಳು, ಕಚೇರಿಗಳ ಮೇಲೆ ತೀವ್ರತರವಾದ ಭಯೋತ್ಪಾದಕ ಗೂಂಡಾ ದಾಳಿ ನಡೆಸುತ್ತಿರುವುದನ್ನು ಖಂಡಿಸಿ ಎಡಪಕ್ಷಗಳು ಇಂದು ಬ್ರಹ್ಮಾವರದಲ್ಲಿ ಪ್ರತಿಭಟನೆ ನಡೆಸಿದವು.
ತಕ್ಷಣವೇ ಗೂಂಡಾ ದಾಳಿಯನ್ನು ನಿಲ್ಲಿಸುವಂತೆ ಮತ್ತು ಈ ಕೂಡಲೇ ಅಲ್ಲಿನ ರಾಜ್ಯ ಸರಕಾರ ಮತ್ತು ಆಡಳಿತ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯನ್ನು ಸ್ಥಾಪಿಸಿ, ಬಲಗೊಳಿಸಲು ಕ್ರಮವಹಿಸುವಂತೆ ಸಿಪಿಎಂ ಒತ್ತಾಯಿಸಿದೆ.
ಚುನಾವಣೆಯ ಸಂದರ್ಭದಲ್ಲೆ ಸಾಕಷ್ಟು ದಾಳಿ, ದಬ್ಬಾಳಿಕೆಯನ್ನು ನಡೆಸಿದ್ದ ಬಿಜೆಪಿ, 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಮಾಣಿಕ್ ಸರ್ಕಾರ್ ಅವರಿಗೂ ಪ್ರಚಾರ ನಡೆಸಲು ಅಡ್ಡಿಪಡಿಸಿದ್ದರು. ಇಂತಹ ಅನೇಕ ಘಟನೆಗಳನ್ನು ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು ಎಂದು ಪ್ರತಿಭಟನಕಾರರು ನುಡಿದರು.
ಹಣ ಮತ್ತು ತೋಳ್ಬಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ, ಕಳೆದ ಚುನಾವಣೆಯಲ್ಲಿ ಗಳಿಸಿದುದಕ್ಕಿಂತ ಈ ಚುನಾವಣೆಯಲ್ಲಿ ಶೇ.10ರಷ್ಠು ಮತ ಕಡಿತಗೊಂಡಿರುವುದು ಮತ್ತು 11 ಸ್ಥಾನಗಳನ್ನು ಕಳೆದುಕೊಂಡಿರುವುದೇ ಈ ಹತಾಶೆಯ ದುಷ್ಕೃತ್ಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಈ ದಾಳಿಯ ವೇಳೆ ಮೂವರನ್ನು ಕೊಲ್ಲಲಾಗಿದೆ. ನೂರಾರು ಕಚೇರಿಗಳು ಹಾಗೂ ಆಸ್ತಿಗಳ ಮೇಲೆ ದಾಳಿ ಎಸಗಿ ಬೆಂಕಿ ಹಚ್ಚಲಾಗಿದೆ. ನೂರಾರು ಜನರು ಗಾಯಗೊಂಡಿದ್ದಾರೆ. ತಕ್ಷಣವೇ, ಭಯೋತ್ಪಾದಕ ದುಷ್ಕೃತ್ಯದಲ್ಲಿ ತೊಡಗಿದ ಎಲ್ಲಾ ಬಿಜೆಪಿಯ ಗೂಂಡಾಗಳನ್ನು ಬಂಧಿಸಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಬೇಕು. ಕೊಲ್ಲಲ್ಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂಗಳ ಮತ್ರು ಆಸ್ತಿ ಹಾನಿಗೆ ಹಾಗೂ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಹಾಗೂ ಆರ್ಥಿಕ ಪರಿಹಾರಗಳನ್ನು ಘೋಷಿಸಬೇಕು. ಅದೇ ರೀತಿ ಅಲ್ಲಿ ಶಾಂತಿ ಸುವ್ಯವಸ್ಥೆಗೆ ಅಗತ್ಯ ಕ್ರಮವಹಿಸುವಂತೆ ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಪ್ರತಿಭಟನೆ ಮೂಲಕ ಒತ್ತಾಯಿಸಿದೆ.
ಪ್ರತಿಭಟನಕಾರರನ್ನು ಉದ್ದೇಶಿಸಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯ ಹಾಗೂ ಉಡುಪಿ ತಾಲೂಕು ಕಾರ್ಯದರ್ಶಿ ಶಶಿಧರ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.