ಸಾವಿರಕ್ಕೂ ಅಧಿಕ ಬೀದಿನಾಯಿಗಳಿಗೆ ಆಹಾರ ನೀಡದೇ ಉಪವಾಸ ಕೆಡವಿ ಹತ್ಯೆಗೈದ ವ್ಯಕ್ತಿ

ಸಿಯೋಲ್, ಮಾ.8: ಬೀದಿ ನಾಯಿಗಳನ್ನು ಸಾಕುವ ನೆಪದಲ್ಲಿ ಸಾವಿರಕ್ಕೂ ಅಧಿಕ ನಾಯಿಗಳನ್ನು ದತ್ತುಪಡೆದ ವ್ಯಕ್ತಿಯೊಬ್ಬ ಬಳಿಕ ಉಪವಾಸ ಕೆಡವಿ ಹತ್ಯೆ ಮಾಡಿರುವ ಅಮಾನವೀಯ ಪ್ರಕರಣ ದಕ್ಷಿಣ ಕೊರಿಯಾದ ಯಾಂಗ್ಪೆಯಂಗ್ ಪ್ರಾಂತದಲ್ಲಿ ವರದಿಯಾಗಿದೆ.
ನಾಯಿ ಸಾಕುವವರಿಂದ ಸಾಕುವುದಾಗಿ ಹೇಳಿ ನಾಯಿಮರಿಗಳನ್ನು ಪಡೆಯುವ ಈ ವ್ಯಕ್ತಿ, ಪ್ರತೀ ನಾಯಿಮರಿಯ ಪೋಷಣೆಗಾಗಿ ಸುಮಾರು 700 ರೂ. ಪಡೆಯುತ್ತಿದ್ದ. ಆದರೆ ಬಳಿಕ ಅವನ್ನು ಒಂದು ರೂಮಿನಲ್ಲಿ ಕೂಡಿಹಾಕಿ ಉಪವಾಸ ಕೆಡವಿ ಸಾಯಿಸುತ್ತಿದ್ದ. ಕಳೆದ 2 ವರ್ಷದಿಂದ ಈತ ಈ ಕೃತ್ಯ ನಡೆಸುತ್ತಿದ್ದ.
ಇತ್ತೀಚೆಗೆ ಸ್ಥಳೀಯ ವ್ಯಕ್ತಿಯೊಬ್ಬ ತನ್ನ ಕಳೆದುಹೋದ ನಾಯಿಯನ್ನು ಹುಡುಕುತ್ತಾ ಈತನ ಮನೆಯ ಕಂಪೌಂಡ್ನೊಳಗೆ ಇಣುಕಿದಾಗ ಸತ್ತನಾಯಿಗಳ ಮೃತದೇಹವನ್ನು ಒಂದೆಡೆ ರಾಶಿಹಾಕಿರುವುದು ಪತ್ತೆಯಾಗಿದೆ. ತಕ್ಷಣ ಈತ ಪ್ರಾಣಿಗಳ ಹಕ್ಕು ರಕ್ಷಣಾ ಸಂಸ್ಥೆಗೆ ಮಾಹಿತಿ ನೀಡಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು , ಆ ವ್ಯಕ್ತಿಯ ವಶದಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ನಾಯಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.







