ಬ್ರಿಟನ್ ನ ಆಶ್ರಯ ಯೋಜನೆಗೆ ವಿಶ್ವಸಂಸ್ಥೆ ಟೀಕೆ

ಜಿನೆವಾ, ಮಾ.8: ವಲಸಿಗರ ಆಶ್ರಯಕ್ಕೆ ಸಂಬಂಧಿಸಿ ಬ್ರಿಟನ್ ಸರಕಾರ ಪ್ರಸ್ತಾವಿಸಿರುವ ಕರಡು ಮಸೂದೆ ತೀವ್ರ ಕಳವಳಕಾರಿಯಾಗಿದ್ದು ಇದು ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಬಹುದು ಎಂದು ವಿಶ್ವಸಂಸ್ಥೆ ಮಾನವಹಕ್ಕುಗಳ ಮುಖ್ಯಸ್ಥ ವಾಕರ್ ಟರ್ಕ್ ಟೀಕಿಸಿದ್ದಾರೆ.
ಈ ಶಾಸನದ ಬಗ್ಗೆ ನನಗೆ ತೀವ್ರ ಕಳವಳವಿದೆ. ಕರಡು ಶಾಸನವು ಇಂಗ್ಲಿಷ್ ಕಾಲುವೆಯನ್ನು ಸಣ್ಣ ದೋಣಿಗಳ ಮೂಲಕ ದಾಟಿ ಬ್ರಿಟನ್ ಪ್ರವೇಶಿಸುವ ಎಲ್ಲರನ್ನು ಬಂಧಿಸಲು ಮತ್ತು ಗಡೀಪಾರು ಮಾಡಲು ಬ್ರಿಟನ್ನ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡುತ್ತದೆ. ಅವರು ಭವಿಷ್ಯದಲ್ಲಿ ಮತ್ತೆ ಬ್ರಿಟನ್ ಪ್ರವೇಶಿಸುವುದನ್ನು ಮತ್ತು ಅವರು ಬ್ರಿಟನ್ ಪೌರತ್ವಕ್ಕೆ ಅರ್ಜಿಹಾಕುವುದನ್ನು ನಿಷೇಧಿಸುತ್ತದೆ. ಬ್ರಿಟನ್ನಲ್ಲಿ ಆಶ್ರಯ ಪಡೆಯುವುದು ಅಥವಾ ಇತರ ರೀತಿಯ ಅಂತರಾಷ್ಟ್ರೀಯ ರಕ್ಷಣೆ ಪಡೆಯುವುದರಿಂದ ಜನರನ್ನು ತಡೆಯುವ ಈ ರೀತಿಯ ಸಗಟು ನಿಷೇಧವು ಅಂತರಾಷ್ಟ್ರೀಯ ಮಾನವಹಕ್ಕುಗಳು ಹಾಗೂ ನಿರಾಶ್ರಿತರ ಕಾನೂನಿನಡಿಯಲ್ಲಿ ಬ್ರಿಟನ್ನ ಬಾಧ್ಯತೆಗಳಿಗೆ ವಿರುದ್ಧವಾಗಿದೆ. ಈ ಶಾಸನವು ಅನಿಯಂತ್ರಿತ ವಲಸೆ ಬಂಧನದ ಮೇಲಿನ ನಿಷೇಧ ಸಹಿತ ಹಲವು ಹಕ್ಕುಗಳ ಉಲ್ಲಂಘನೆಯಾಗಿದೆ ಎಂದವರು ಎಚ್ಚರಿಕೆ ನೀಡಿದ್ದಾರೆ.
ಪ್ರತೀ ವರ್ಷ ಸಣ್ಣ ದೋಣಿಗಳ ಮೂಲಕ ಇಂಗ್ಲಿಷ್ ಕಾಲುವೆಯನ್ನು ದಾಟಿ ಬ್ರಿಟನ್ಗೆ ಆಗಮಿಸುವ ಸಾವಿರಾರು ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ಹೊಸ ಶಾಸನವೊಂದನ್ನು ಜಾರಿಗೊಳಿಸಲು ಬ್ರಿಟನ್ನ ಕನ್ಸರ್ವೇಟಿವ್ ಸರಕಾರ ಚಿಂತನೆ ನಡೆಸಿದೆ. ವಲಸಿಗರ ಆಶ್ರಯ ಹಕ್ಕುಗಳನ್ನು ಕಾನೂನು ಬಾಹಿರಗೊಳಿಸಲು, ಮತ್ತು ಅವರನ್ನು ರವಾಂಡದಂತಹ ದೇಶಗಳಿಗೆ ವರ್ಗಾಯಿಸುವುದು ಸರಕಾರದ ಯೋಜನೆಯಾಗಿದೆ.
ಅನಿವಾರ್ಯವಾಗಿ ತಮ್ಮ ಮೂಲ ದೇಶವನ್ನು ತೊರೆಯಲು ಒತ್ತಾಯಿಸಲ್ಪಟ್ಟ ಎಲ್ಲಾ ಜನರು ಅವರ ಮಾನವಹಕ್ಕುಗಳ ಸಂಪೂರ್ಣ ಗೌರವಕ್ಕೆ ಅರ್ಹರಾಗಿದ್ದಾರೆ ಎಂದು ವಾಕರ್ ಟರ್ಕ್ ಹೇಳಿದ್ದಾರೆ.