ಬಂಧಿತ ಉಕ್ರೇನ್ ಯೋಧನ ಗುಂಡಿಕ್ಕಿ ಹತ್ಯೆಗೈದ ರಶ್ಯ ಸೇನೆ: ವ್ಯಾಪಕ ಖಂಡನೆ

ಕೀವ್, ಮಾ.8: ಬಂಧಿತ ಉಕ್ರೇನ್ ಯೋಧನೊಬ್ಬನನ್ನು ರಶ್ಯ ಸೇನೆ ಅತೀ ಸಮೀಪದಿಂದ ಗುಂಡಿಕ್ಕಿ ಹತ್ಯೆಗೈದಿರುವ ವೀಡಿಯೊ ವೈರಲ್ ಆಗಿದ್ದು ವಿಶ್ವಸಂಸ್ಥೆಯ ಮುಖ್ಯಸ್ಥರ ಸಹಿತ ಅಂತರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಯುದ್ಧದಲ್ಲಿ ಸೆರೆಸಿಕ್ಕ ಉಕ್ರೇನ್ ಯೋಧನೊಬ್ಬನನ್ನು ರಶ್ಯ ಸೈನಿಕರು ಪ್ರಶ್ನಿಸುತ್ತಿರುವುದು, ಬಳಿಕ ಉಕ್ರೇನ್ ಯೋಧ `ಉಕ್ರೇನ್ನ ವೈಭವ ಚಿರಾಯುವಾಗಲಿ' ಎಂದು ಘೋಷಣೆ ಕೂಗಿದಾಗ ಆತನ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿರುವ ವೀಡಿಯೊ ವೈರಲ್ ಆಗಿದೆ.
ಪ್ರಾಥಮಿಕ ತನಿಖೆಯ ಆಧಾರದಲ್ಲಿ ಈ ವೀಡಿಯೊ ಅಧಿಕೃತವಾಗಿರಬಹುದೆಂದು ತೀರ್ಮಾನಿಸಿರುವುದಾಗಿ ವಿಶ್ವಸಂಸ್ಥೆ ಮಾನವಹಕ್ಕುಗಳ ವಿಭಾಗದ ವಕ್ತಾರೆ ಹೇಳಿದ್ದಾರೆ. ಒಂದು ವರ್ಷದ ಹಿಂದೆ ರಶ್ಯವು ಉಕ್ರೇನ್ ಮೇಲೆ ದಾಳಿ ಆರಂಭಿಸಿದಂದಿನಿಂದ ಯುದ್ಧಕೈದಿಗಳ ಮಾನವಹಕ್ಕುಗಳ ಉಲ್ಲಂಘನೆಯ ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ರಶ್ಯ ಮತ್ತು ಉಕ್ರೇನ್ ಎರಡೂ ದೇಶಗಳು ನಡೆಸಿದ ಸಾಮೂಹಿಕ ಮರಣದಂಡನೆ ಪ್ರಕರಣಗಳೂ ಇದರಲ್ಲಿ ಸೇರಿವೆ ಎಂದವರು ಹೇಳಿದ್ದಾರೆ.
ರಶ್ಯದ ಈ ಕೃತ್ಯ ಯುದ್ಧಾಪರಾಧವಾಗಿದ್ದು ತಕ್ಷಣ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಉಕ್ರೇನ್ ಆಗ್ರಹಿಸಿದೆ. ದ್ವಿತೀಯ ವಿಶ್ವಯುದ್ಧದ ಬಳಿಕ ಅಂಗೀಕರಿಸಿದ್ದ ಸಾರ್ವತ್ರಿಕ ಮಾನವಹಕ್ಕುಗಳ ನಿರ್ಣಯಕ್ಕೆ ಇದು ವ್ಯತಿರಿಕ್ತವಾಗಿದೆ ಎಂದು ವಿಶ್ವಸಂಸ್ಥೆ ಮಾನವಹಕ್ಕುಗಳ ಏಜೆನ್ಸಿ ಮುಖ್ಯಸ್ಥ ವೋಕರ್ ಟರ್ಕ್ ಹೇಳಿದ್ದಾರೆ. ಉಕ್ರೇನಿ ಸೈನಿಕನ ಹತ್ಯೆಯ ಇತ್ತೀಚಿನ ವೀಡಿಯೊ ಅತ್ಯಂತ ಕಳವಳಕ್ಕೆ ಕಾರಣವಾಗಿದ್ದು ಯುದ್ಧದ ನಿಯಮವನ್ನು ಗೌರವಿಸಬೇಕು ಎಂಬುದನ್ನು ಮತ್ತೊಮ್ಮೆ ಜ್ಞಾಪಿಸುತ್ತದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಪ್ರತಿಕ್ರಿಯಿಸಿದ್ದಾರೆ.