ಆರು ತಿಂಗಳು ಮೊದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಹನುಮೇಗೌಡ ಮನವಿ

ಬೆಂಗಳೂರು, ಮಾ. 8: ‘ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಆರು ತಿಂಗಳು ಮೊದಲೇ ನೀತಿ ಸಂಹಿತೆ ಜಾರಿ ಮಾಡಬೇಕು. ಜೊತೆಗೆ ಸಿಎಂ ಅಥವಾ ಪ್ರಧಾನಿ ಸುಳ್ಳು ಭರವಸೆಗಳನ್ನು ನೀಡಲು ಅವಕಾಶ ನೀಡಬಾರದು. ಪೊಳ್ಳು ಆಶ್ವಾಸನೆ ನೀಡುವಂತಿದ್ದರೆ ಅವರು ಆ ಸ್ಥಾನಗಳಲ್ಲಿ ಇರಬಾರದು’ ಎಂದು ಸಾಮಾಜಿಕ ಕಾರ್ಯಕರ್ತ ಎನ್.ಹನುಮೇಗೌಡ, ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಬುಧವಾರ ಮುಖ್ಯಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಿದ್ದು, ‘ಯಾವುದೇ ಜಾತಿ, ಮತ, ಜನಾಂಗಗಳಿಗೆ ವಿಶೇಷ ಅನುದಾನ ಅಥವಾ ನಿಗಮ ಮಂಡಳಿಗಳ ಮೂಲಕ ಅಭಿವೃದ್ಧಿಯ ಘೋಷಣೆ ಮಾಡಿದಲ್ಲಿ ಅಂತಹವರ ವಿರುದ್ಧ ಶಿಕ್ಷಾರ್ಹ ಅಪರಾಧ ಎಂಬ ಕಾನೂನು ಜಾರಿಯಾಗಬೇಕಿದೆ. ನೀತಿ ಸಂಹಿತೆ ಜಾರಿಯಾದ ನಂತರ ಯಾವುದೇ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಲೋಕಾರ್ಪಣೆ ಕಾರ್ಯಕ್ರಮಗಳನ್ನು ನಡೆಸಬಾರದು. ಪ್ರಧಾನಿ, ಸಿಎಂಗೆ ಚುನಾವಣಾ ಪ್ರಚಾರದಿಂದ ನಿರ್ಬಂಧ ಹೇರಬೇಕು ಎಂದು ಕೋರಿದ್ದಾರೆ.
‘ಆಸೆ, ಆಮಿಷಗಳಿಗೆ ಮತದಾನ ಹಕ್ಕನ್ನು ಮಾರಾಟ ಮಾಡಿಕೊಳ್ಳುವುದು ಶಿಕ್ಷಾರ್ಹ ಅಪರಾಧ' ಎಂಬ ಕಾನೂನಿನ ಅವಶ್ಯಕತೆ ಇದೆ. ಜತೆಗೆ ಆಮಿಷವೊಡ್ಡಿದ್ದು ಸಾಬೀತಾದರೆ ಅಂತಹ ವ್ಯಕ್ತಿ, ಅಭ್ಯರ್ಥಿಯಾಗಲು ನಿರ್ಬಂಧ ವಿಧಿಸಬೇಕು. ಆದರೆ, ರಾಜ್ಯದಲ್ಲಿ ಸೀರೆ, ಕುಕ್ಕರ್ ಸಹಿತ ಗೃಹೋಪಯೋಗಿ ವಸ್ತುಗಳ ಹಂಚಿಕೆ ನಡೆಯುತ್ತಿದ್ದು, ಮಾಧ್ಯಮಗಳಲ್ಲಿ ನಿತ್ಯ ಪ್ರಕಟವಾಗುತ್ತಿದೆ. ಹೀಗಾಗಿ ಆಯೋಗ ವಿಶೇಷ ನಿಗಾ ವಹಿಸಬೇಕು’ ಎಂದು ಹನುಮೇಗೌಡ ಆಗ್ರಹಿಸಿದ್ದಾರೆ.
ಚುನಾವಣೆಗೆ ಮೊದಲೆ ಬೃಹತ್ ಸಮಾವೇಶಗಳ ಮೂಲಕ ಮಾಂಸ-ಹೋಳಿಗೆ ಊಟ ಹಾಕಿಸಲಾಗುತ್ತಿದ್ದು, ಉಡುಗೊರೆ ನೀಡಲಾಗುತ್ತಿದೆ. ಈ ಸಮಾವೇಶಗಳಿಗೆ ಕೋಟ್ಯಂತರ ರೂ.ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಮನಸೋ ಇಚ್ಛೆ ಖರ್ಚಿಗೆ ಮಿತಿ ಹೇರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಕ್ರಮ ವಹಿಸಿ ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸಲು ಕ್ರಮ ಕೈಗೊಳ್ಳÀಬೇಕೆಂದು ಹನುಮೇಗೌಡ ಮನವಿ ಮಾಡಿದ್ದಾರೆ.







