ಬಾಬಾಬುಡಾನ್‌ಗಿರಿ: ಮುಸ್ಲಿಮ್ ಸಂಘಟನೆಗಳ ವಿರೋಧದ ನಡುವೆ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ನಡೆದ ಉರೂಸ್

ಚಿಕ್ಕಮಗಳೂರು,ಮಾ.8: ಗುರು ಇನಾಂ ದತ್ತಾತ್ರೇಯ ಬಾಬಾಬುಡಾನ್‌ಗಿರಿ ದರ್ಗಾದ ಆವರಣದಲ್ಲಿ ಗುರುವಾರ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಸಂದಲ್ ಉರೂಸ್ ನಡೆದಿದ್ದು, ಸಮಿತಿ ನೇತೃತ್ವದಲ್ಲಿ ಉರೂಸ್ ಆಚರಣೆ ವಿರೋಧಿಸಿ ಜಿಲ್ಲಾ ಹಝರತ್ ದಾದಾ ಹಯಾತ್ ಮೀರ್ ಖಲಂದರ್ ಕಮಿಟಿ ಹಾಗೂ ಮುಸ್ಲಿಮ್ ಸಮುದಾಯದ ಮುಖಂಡರು ದರ್ಗಾದ ಆವರಣದಲ್ಲಿ ಧರಣಿ ನಡೆಸಿದರು.
ಗುರು ಇನಾಂ ದತ್ತಾತ್ರೇಯ ಬಾಬಾಬುಡಾನ್ ಗಿರಿ ದರ್ಗಾದ ಆವರಣದಲ್ಲಿ ಪ್ರತೀ ವರ್ಷ ಸಂದಲ್ ಉರೂಸ್ ಆಚರಣಾ ಸಮಿತಿಯು ಶಾಖಾದ್ರಿ ಹಾಗೂ ಸಜ್ಜಾದ್ ಎ ನಿಶಾನ್ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ಉರೂಸ್ ಆಚರಣೆ ಮಾಡುತ್ತಿದ್ದು, ಈ ಬಾರಿ ರಾಜ್ಯ ಸರಕಾರ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಉರೂಸ್ ಆಚರಣೆಗೆ ಅವಕಾಶ ಕಲ್ಪಿಸಿದೆ. ಆದರೆ, ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕಾತಿಯೇ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ಮುಸ್ಲಿಮ್ ಮುಖಂಡರು ಹಾಗೂ ಕೆಲ ಸಂಘಟನೆಗಳು ವ್ಯವಸ್ಥಾಪನಾ ಸಮಿತಿ ರದ್ದತಿ ಕೋರಿ ನ್ಯಾಯಾಲಯದಲ್ಲಿ ಕಾನೂನೂ ಹೋರಾಟ ಮುಂದುವರಿಸಿದ್ದವು.
ಈ ಮಧ್ಯೆ ಉರೂಸ್ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಕರೆದಿದ್ದ ಉರೂಸ್ ಆಚರಣೆ ಸಮಿತಿ ಸದಸ್ಯರು ಗೈರಾಗಿದ್ದು, ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಉರೂಸ್ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಭಾಗವವಹಿಸುವುದಿಲ್ಲ ಎಂದು ಹೇಳಿಕೆಯನ್ನೂ ನೀಡಿದ್ದರು.
ಗುರುವಾರ ಗುರು ಇನಾಂ ದತ್ತಾತ್ರೇಯ ಬಾಬಾಬುಡಾನ್ ಗಿರಿ ದರ್ಗಾದ ಆವರಣದಲ್ಲಿ ವ್ಯವಸ್ಥಾ ಪನಾ ಸಮಿತಿ ನೇತೃತ್ವದಲ್ಲೇ ಉರೂಸ್ ನಡೆದಿದ್ದು, ಈ ಉರೂಸ್ ಕಾರ್ಯಕ್ರಮದಲ್ಲಿ ಉರೂಸ್ ಆಚರಣೆ ಸಮಿತಿ ಭಾಗವಹಿಸಲಿಲ್ಲ, ಉರೂಸ್ ಅಂಗವಾಗಿ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಮುಸ್ಲಿಮ್ ಭಕ್ತರು ವ್ಯವಸ್ಥಾಪನಾ ಸಮಿತಿಯ ಉರೂಸ್ ಬಹಿಷ್ಕರಿಸಿ ಹಿಂದಿರುಗುತ್ತಿದ್ದರು.
ವ್ಯವಸ್ಥಾಪನಾ ಸಮಿತಿಯ 8 ಸದಸ್ಯರ ಪೈಕಿ ಓರ್ವ ಮುಸ್ಲಿಮ್ ವ್ಯಕ್ತಿ ಇದ್ದು, ಈ ವ್ಯಕ್ತಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವವರೇ ಆಗಿದ್ದಾರೆ. ಸಮಿತಿಯಲ್ಲಿ ಎರಡೂ ಧರ್ಮದವರಿಗೆ ಸಮಾನ ಪ್ರಾತಿನಿಧ್ಯ ನೀಡದಿರುವುದರಿಂದ ಸಮಿತಿ ಸದಸ್ಯರು ದರ್ಗಾದಲ್ಲಿನ ಪೂಜೆ ಹಾಗೂ ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದರು.
ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಉರೂಸ್ ಆಚರಣೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ವ್ಯವಸ್ಥಾಪನಾ ಸಮಿತಿಯನ್ನು ಕಾನೂನು ಬಾಹಿರವಾಗಿ ರಚಿಸಿದ್ದು, ಅದನ್ನು ಕೂಡಲೇ ರದ್ದು ಪಡಿಸಬೇಕು. ಈ ಸಮಿತಿ ಹಿಂದಿನ ಉರೂಸ್ ಆಚರಣೆಯನ್ನು ವಿಧಿ ವಿಧಾನ ಗಳನ್ನು ಪಾಲಿಸಿಲ್ಲ. ಗೋರಿಗಳಿಗೆ ಹಸಿರು ಬಟ್ಟೆ ಹಾಕುತ್ತಿಲ್ಲ. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುತ್ತಿಲ್ಲ. ಸಮಿತಿ ಸದಸ್ಯರು ಉರೂಸ್‌ಅನ್ನು ಕಾನೂನು ಬಾಹಿರವಾಗಿ ಉರೂಸ್ ಆಚರಣೆ ಮಾಡುತ್ತಿದ್ದಾರೆ. ಗೋರಿಗಳಿಗೆ ಸಂದಲ್ ಹಾಕಲು ಅವಕಾಶ ನೀಡುತ್ತಿಲ್ಲ. 1975ರಲ್ಲಿ ಯಥಾಸ್ಥಿತಿ ಆದೇಶವನ್ನು ಪಾಲಿಸುತ್ತಿಲ್ಲ. ಕೆಲ ಕೋಮುವಾದಿಗಳು ಬಾಬಾಬುಡಾನ್‌ಗಿರಿ ವಿವಾದ ಮುಂದಿಟ್ಟುಕೊಂಡು ಹಿಂದೂ-ಮುಸ್ಲಿಮರ ನಡುವಿನ ಸೌಹಾರ್ದ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಮುಸ್ಲಿಮ್ ಭಕ್ತರಿಗೆ ಆಹಾರ ತಯಾರಿಸಿಕೊಳ್ಳಲು ಬಿಡುತ್ತಿಲ್ಲ. ಸರಕಾರ, ಜಿಲ್ಲಾಡಳಿತ, ವ್ಯವಸ್ಥಾಪನಾ ಸಮಿತಿಯ ಕಾನೂನು ಬಾಹಿರ ಉರೂಸ್ ಆಚರಣೆ ಧಿಕ್ಕರಿಸಿ ಪ್ರತಿಭಟನೆ ನಡೆಸಿದ್ದೇವೆ. ಗುರುವಾರ ಶಾಖಾದ್ರಿ ನೇತೃತ್ವದಲ್ಲಿ ಪ್ರತ್ಯೇಕವಾಗಿ ಉರೂಸ್ ಮಾಡಲಿದ್ದು, ಇದಕ್ಕೆ ಜಿಲ್ಲಾಡಳಿತ ಸಹಕಾರ ನೀಡಬೇಕು.
- ಜಂಶೀದ್







