ಉಡುಪಿ: 28 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ

ಉಡುಪಿ,ಮಾ.9: ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪ್ರಾರಂಭಗೊಂಡಿದ್ದು, ಮೊದಲ ದಿನವಾದ ಇಂದು ವಿದ್ಯಾರ್ಥಿಗಳು ಕನ್ನಡ ಭಾಷಾ ಪರೀಕ್ಷೆ ಬರೆಯಲಿದ್ದಾರೆ.
ಜಿಲ್ಲೆಯಲ್ಲಿ ಆರಂಭಗೊಂಡಿರುವ ದ್ವಿತೀಯ ಪಿಯುಸಿ ಪರೀಕ್ಷೆ ಕುರಿತಂತೆ, ಪರೀಕ್ಷಾ ಕೇಂದ್ರದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು ಇಂದು ನಗರದ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 15,634 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಹೊಸದಾಗಿ 14,341, ಖಾಸಗಿ 719 ಹಾಗೂ 575 ಪುನರಾವರ್ತಿತರು ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಒಟ್ಟು 7,739 ವಿದ್ಯಾರ್ಥಿಗಳು ಹಾಗೂ 7896 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದು, ವಿಜ್ಞಾನ ವಿಭಾಗದಲ್ಲಿ 6303, ವಾಣಿಜ್ಯ ವಿಭಾಗದಲ್ಲಿ 7673, ಕಲಾ ವಿಭಾಗದಲ್ಲಿ 1658 ವಿದ್ಯಾರ್ಥಿಗಳಿದ್ದಾರೆ.
ಪರೀಕ್ಷಾ ಕೇಂದ್ರ ಆವರಣದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದ್ದು, ತುರ್ತು ಸಂದರ್ಭ ಮತ್ತು ಶೀತ-ಜ್ವರ ಲಕ್ಷಣ ಇರುವ ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಅಗತ್ಯವಿದ್ದರೆ, ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷೆ ಹಿನ್ನಲೆಯಲ್ಲಿ ಇಂದಿನಿಂದ 29 ನೇ ತಾರೀಖಿನವರೆಗೂ ಶಾಲಾ ಆವರಣದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
