ಬಂಟ್ವಾಳ: ಮಾರ್ಚ್ 10 ರಿಂದ 23 ರ ವರೆಗೆ ರಮಾನಾಥ ರೈ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ

ಬಂಟ್ವಾಳ,ಮಾ.9: ನನ್ನ ಶಾಸಕ ಅವಧಿಯಲ್ಲಿ ಮಂಜೂರಾತಿ ಪಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲು ಇಂದಿನ ಶಾಸಕರಿಗೆ ಇದುವರೆಗೂ ಸಾದ್ಯವಾಗಿಲ್ಲ. ಇದು ಅವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಟ್ವಾಳದ ಒಳಚರಂಡಿ ಯೋಜನೆ ಮಂಜೂರಾತಿಯನ್ನು 2017ರ ಅಕ್ಟೋಬರ್ 10ರಂದು ನಾನು ಮಾಡಿಸಿದ್ದೇನೆ. ಇದಕ್ಕೆ ದಾಖಲಾತಿ ಇದೆ. ಆರು ವರ್ಷಗಳಾದರೂ ಇದರ ಕೆಲಸ ಇನ್ನೂ ಆರಂಭಗೊಂಡಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತನ್ನ ಅವಧಿಯಲ್ಲಿ ಆಗಿದ್ದು ಎಂದು ನೆನಪಿಸಿದ ಅವರು, ಬೆಂಜನಪದವು ಮಾದರಿ ಕ್ರೀಡಾಂಗಣಕ್ಕೆ ಮಂಜೂರಾತಿ ಪಡೆಯಲಾಗಿದೆ. ಬಂಟ್ವಾಳ ತಾಲೂಕಿನ ಹೆಮ್ಮೆ ಎನಿಸಿದ ಪಂಜೆ ಮಂಗೇಶರಾಯರ ಸ್ಮಾರಕ ಭವನ ನಿರ್ಮಾಣಕ್ಕೆ ಎಂಟು ಕೋಟಿಗಳನ್ನು ಮಂಜೂರುಗೊಳಿಸಿ ಕೆಲಸ ಆರಂಭಿಸಲಾಗಿತ್ತು. ಆದರೆ ಈಗಿನ ಶಾಸಕರ ಅವಧಿಯಲ್ಲಿ ಇದುವರೆಗೂ ಪೂರ್ಣ ಗೊಂಡಿಲ್ಲ ಎಂದರು.
ಮತೀಯ ಸಂಘಟನೆಗಳು ಘರ್ಷಣೆ, ಕೊಲೆ ಕೃತ್ಯಗಳನ್ನು ನಡೆಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಹಾಕಿದ್ದಾರೆ. ಬಳಿಕ ಕೊಲೆಗಡುಕರೊಂದಿಗೆ ತಿರುಗಾಡುವ ಮೂಲಕ ಅವರಿಗೆ ಬೆಂಬಲವನ್ನೂ ನೀಡಿದ್ದಾರೆ. ಆದರೆ ಇದುವರೆಗೆ ನಡೆದ ಯಾವುದೇ ಗಲಭೆ ಅಥವಾ ಕೊಲೆಯಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತನ ಹೆಸರು ಪೊಲೀಸ್ ಎಫ್ ಐ ಆರ್ ನಲ್ಲಿ ದಾಖಲಾಗಿಲ್ಲ. ಈ ಬಗ್ಗೆ ಏನಾದರೂ ಪುರಾವೆ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ರಮಾನಾಥ ರೈ ಸವಾಲು ಹಾಕಿದ್ದಾರೆ.
ಬಂಟ್ವಾಳದ ಈಗಿನ ಶಾಸಕರು ನನ್ನ ಮೇಲೆ ಮರಳು ಮಾಫಿಯಾ ಎಂದು ಆರೋಪ ಮಾಡಿದ್ದು ಬಿಟ್ಟರೆ ಅದಕ್ಕೆ ಇದುವರೆಗೂ ದಾಖಲೆ ನೀಡಲು ಸಾಧ್ಯವಾಗಿಲ್ಲ. ಆದರೆ ಇವತ್ತು ಹಾಲಿ ಶಾಸಕರಿಗೆ ಅಭಿನಂದನೆ ಬ್ಯಾನರ್ ಹಾಕುವವರೆಲ್ಲರೂ ಮರಳು ಮಾಫಿಯಾ, ಇಸ್ಪೀಟ್ ದಂಧೆಕೋರರು ಆಗಿದ್ದಾರೆ ಎಂದು ಟೀಕಿಸಿದ ಅವರು ಕರ್ನಾಟಕ ಸರಕಾರದಲ್ಲಿ ಬರೋಬ್ಬರಿ 13 ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದು, ದ ಕ ಜಿಲ್ಲೆಯಲ್ಲಿ ಇತಿಹಾಸ. ಅಭಿವೃದ್ದಿ ಕಾಮಗಾರಿಯಲ್ಲೂ ಬಂಟ್ವಾಳ ಕ್ಷೇತ್ರ ಇತಿಹಾಸವನ್ನು ಕಂಡಿದೆ. ನನ್ನ ಅವಧಿಯಲ್ಲಿ 20 ಸಾವಿರ ಮಂದಿಗೆ ಹಕ್ಕು ಪತ್ರ ನೀಡಿ ಸ್ವಾಭಿಮಾನದ ಬದುಕು ಕಲ್ಪಿಸಿದ್ದೇನೆ ಎಂದರು.
ಅಭಿವೃದ್ದಿಯಲ್ಲಿ ನಾನು ಯಾವತ್ತೂ ಸೋತಿಲ್ಲ, ಸೋಲಿನಿಂದ ನಾನು ಎದೆಗುಂದಲೂ ಇಲ್ಲ. ವಿರೋಧಿಗಳ ಅಪಪ್ರಚಾರ, ಸುಳ್ಳಿನ ಕಂತೆಗಳಿಂದ ನನಗೆ ತಾತ್ಕಾಲಿಕ ಸೋಲು ಆಗಿರಬಹುದು. ಆದರೆ ಸತ್ಯ ಎಂದಿಗೂ ಸಾಯುವುದಿಲ್ಲ ಮತ್ತೊಮ್ಮೆ ಬಂಟ್ವಾಳದಲ್ಲಿ ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಮಾತನಾಡಿ ಮಾರ್ಚ್ 10 ರಿಂದ 23 ರ ತನಕ ಮಾಜಿ ಸಚಿವ ರಮಾನಾಥ ರೈ ಅವರ ಐದು ವರ್ಷಗಳ ಶಾಸಕತ್ವದ ಅವಧಿಯಲ್ಲಿ ಸಿದ್ಧರಾಮಯ್ಯ ಸರಕಾರ ಮೂಲಕ ಕ್ಷೇತ್ರದಾದ್ಯಂತ ಕೈಗೊಳ್ಳಲಾದ 5 ಸಾವಿರ ಕೋಟಿ ರೂಗಳ ಪ್ರಗತಿಕಾರ್ಯಗಳನ್ನು ಜನರಿಗೆ ತಿಳಿಸುವ ಸಲುವಾಗಿ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ನಡೆಯಲಿದ್ದು, ಪ್ರತಿ ದಿನ ಮೂರು ಗ್ರಾ ಪಂ ವ್ಯಾಪ್ತಿಯಲ್ಲಿ ಸಂಚರಿಸಲಿದ್ದು, ಪ್ರತಿ ದಿನ ಸಂಜೆ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ, ಪಕ್ಷದ ಹಿರಿಯ ನಾಯಕರು, ಪ್ರಮುಖ ಭಾಷಣಗಾರರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಾಯಿಲಪ್ಪ ಸಾಲ್ಯಾನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ತುಂಬೆ, ಬಿ ಎಂ ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಚಂದ್ರಶೇಖರ ಪೂಜಾರಿ, ಸುರೇಶ್ ಪೂಜಾರಿ ಜೋರಾ, , ಮಧುಸೂಧನ್ ಶೆಣೈ, ಚಂದ್ರಶೇಖರ ಭಂಡಾರಿ, ಸದಾಶಿವ ಬಂಗೇರ, ಮೊದಲಾದವರು ಉಪಸ್ಥಿತರಿದ್ದರು.