ಭ್ರಷ್ಟಾಚಾರ ಪ್ರಕರಣ: ಕಾಂಗ್ರೆಸ್ ಬಣ್ಣ ಬಯಲು ಮಾಡುತ್ತೇವೆ ಎಂದ ಸಿಎಂ ಬೊಮ್ಮಾಯಿ

ವಿಜಯಪುರ: 'ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಬಣ್ಣ ಬಯಲು ಮಾಡುತ್ತೇವೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಶಾಸಕ ಮಾಡಾಳ್ ರೂಪಾಕ್ಷಪ್ಪ ಪ್ರಕರಣದ ವಿಚಾರದಲ್ಲಿ ನಾನು ಈಗಾಗಲೇ ಹೇಳಿದ್ದೇನೆ. ಈ ಪ್ರಕರಣದಲ್ಲಿ ಲೋಕಾಯುಕ್ತರಿಗೆ ನಾವು ಸರ್ವ ಸ್ವತಂತ್ರ ಕೊಟ್ಟಿದ್ದೇವೆ. ಲೋಕಾಯುಕ್ತರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ನ್ಯಾಯಾಲಯದ ತೀರ್ಮಾನಕ್ಕೆ ನಾವೆಲ್ಲಾ ತಲೆ ಬಾಗಬೇಕಾಗುತ್ತದೆ. ಇದರ ನಂತರ ಲೋಕಾಯುಕ್ತರು ಮುಂದಿನ ತನಿಖೆ ನಡೆಸಿದ್ದಾರೆ. ಇದರಲ್ಲಿ ಯಾವುದನ್ನೂ ಮುಚ್ಚಿಡೋ ಪ್ರಶ್ನೆ ಇಲ್ಲ'' ಎಂದು ಹೇಳಿದರು.
''ಕಾಂಗ್ರೆಸ್ ನವರು ಈ ಥರ ಆಪಾದನೋ ಮಾಡೋ ಮೂಲಕ ಅವರು ಮಾಡಿರೋ ಭ್ರಷ್ಟಚಾರ ತೊಳೆದು ಹೋಗಲ್ಲ. ಅವರು ಮಾಡಿರೋ ಭ್ರಷ್ಟಾಚಾರದ ಪಾಪ ತೊಳೆದು ಹೋಗಲ್ಲ. ಅದು ಮತ್ತೆ ಬಂದೇ ಬರುತ್ತದೆ, 59 ಕೇಸ್ ಗಳನ್ನು ಎಸಿಬಿ ಕೊಟ್ಟಿದ್ದನ್ನು ಲೋಕಾಯುಕ್ತಕ್ಕೆ ಕೊಡುತ್ತೇವೆ. ಅಲ್ಲಿ ಕಾಂಗ್ರೆಸ್ ನ ಬಹಳಷ್ಟು ಬಣ್ಣ ಬದಲಾಗುತ್ತದೆ'' ಎಂದು ಹೇಳಿದರು.





