ಉತ್ತರ ಪ್ರದೇಶದಲ್ಲಿ ಕಳೆದ 6 ವರ್ಷಗಳಲ್ಲಿ ಯಾವುದೇ ರೈತ ಆತ್ಮಹತ್ಯೆ ಮಾಡಿಲ್ಲ ಎಂದ ಸಿಎಂ ಆದಿತ್ಯನಾಥ್
ಹೇಳಿಕೆ ಸುಳ್ಳು ಎನ್ನುತ್ತಿರುವ ರೈತರು
ಲಕ್ನೋ: ಉತ್ತರ ಪ್ರದೇಶದಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ ಯಾವುದೇ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಆದಿತ್ಯನಾಥ್ (Uttar Pradesh Chief Minister Adityanath) ಅವರು ಸೋಮವಾರ ಲಕ್ನೋ ನಗರದಲ್ಲಿ 77 ಟ್ರ್ಯಾಕ್ಟರ್ ಸೇವೆಯನ್ನು ಉದ್ಘಾಟಿಸಿ ಮಾತನಾಡುವಾಗ ಹೇಳಿಕೊಂಡಿದ್ದರು. ಸಹಕಾರಿ ಕಬ್ಬು ಮತ್ತು ಸಕ್ಕರೆ ಕಾರ್ಖಾನೆ ಸೊಸೈಟಿಗಳ ಕೃಷಿ ಉಪಕರಣಗಳ ಬ್ಯಾಂಕುಗಳಿಗೆಂದು ಈ ಟ್ರ್ಯಾಕ್ಟರ್‌ಗಳನ್ನು ಒದಗಿಸಲಾಗಿತ್ತು.
ಆದರೆ ಮುಖ್ಯಮಂತ್ರಿಯ ಹೇಳಿಕೆಗೂ ರಾಜ್ಯದಲ್ಲಿನ ವಾಸ್ತವ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ರಾಜ್ಯದ ಬುಂದೇಲ್‌ಖಂಡ್ ಪ್ರಾಂತ್ಯದಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸರ್ಕಾರದ ತಪ್ಪಾದ ನೀತಿಗಳು, ಬ್ಯಾಂಕ್‌ಗಳಿಂದ ಒತ್ತಡ ಹಾಗೂ ಕೃಷಿಯಲ್ಲಿ ನಷ್ಟದಿಂದ ನೊಂದು ಈ ರೈತರು ಪ್ರಾಣ ಕಳೆದುಕೊಂಡಿದ್ದಾರೆಂದು ಆರೋಪಿಸಲಾಗಿತ್ತು ಎಂದು newsclick.in ವರದಿ ಮಾಡಿದೆ.
ಸರಕಾರ ಕೃಷಿಕರಿಗೆ ಒದಗಿಸುವ ಸವಲತ್ತುಗಳಲ್ಲಿ ಹೆಚ್ಚಳವಾಗಿದ್ದರೂ, ರೈತರ ಸಮಸ್ಯೆಗಳು ಪರಿಹಾರವಾಗಿಲ್ಲ., ಬಂಡ ಎಂಬ ಸ್ಥಳದಲ್ಲಿ ಎರಡು ವಾರಗಳಲ್ಲಿ ಮೂರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೃಷಿಕರೊಬ್ಬರು ಮಾಹಿತಿ ನೀಡಿದ್ದಾರೆ.
ಅಖಿಲ ಭಾರತ ಕಿಸಾನ್ ಸಭಾ ಇದರ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮುಕುಟ್ ಸಿಂಗ್ ಮಾತನಾಡಿ, ಸರ್ಕಾರ ರೈತರ ಆತ್ಮಹತ್ಯೆಗಳಿಗೆ ನೈತಿಕ ಹೊಣೆ ಹೊರುವ ಬದಲು ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಲಜ್ಜೆಯಿಲ್ಲದೆ ಹೇಳುತ್ತಿದೆ. ವಾಸ್ತವವಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಹಾಗೂ ಸರ್ಕಾರ ಅಂಕಿಅಂಶ ನೀಡುವುದನ್ನು ನಿಲ್ಲಿಸಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್‌ನ ರಾಕೇಶ್ ಟಿಕಾಯತ್ ಪ್ರತಿಕ್ರಿಯಿಸಿ ಸರಕಾರ ವೃತ್ತಿಪರ ಸುಳ್ಳುಗಾರ ಎಂದು ಹೇಳಿದರು. "ಕೋವಿಡ್‌ನಿಂದ ಯಾರೂ ಸತ್ತಿಲ್ಲ ಎಂದು ಅದೇ ಸರ್ಕಾರ ಹೇಳಿತ್ತು, ಅದೇ ಪಕ್ಷದ ಕೇಂದ್ರ ಸರ್ಕಾರವು ರೈತರ ಪ್ರತಿಭಟನೆಯಲ್ಲಿ ಯಾರೂ ಸತ್ತಿಲ್ಲ ಎಂದಿತ್ತು. ಹಾಗೆಯೇ ಈಗ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎನ್ನುತ್ತಿದ್ದಾರೆ," ಎಂದು ಅವರು ಹೇಳಿದರು.
ಇದನ್ನೂ ಓದಿ: ಸಂಸದೀಯ ಸ್ಥಾಯಿ ಸಮಿತಿಗಳಿಗೆ ವೈಯಕ್ತಿಕ ಸಿಬ್ಬಂದಿ ನೇಮಕ ಮಾಡಿದ ಉಪರಾಷ್ಟ್ರಪತಿ: ವ್ಯಾಪಕ ವಿರೋಧ