ಬೆಂಗಳೂರು: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಬೆಂಗಳೂರು, ಮಾ. 9: ನಗರದಲ್ಲಿ ಶವವಾಗಿ ಪತ್ತೆಯಾಗಿದ್ದ ಮಹಿಳೆ ಕೊಲೆ ಪ್ರಕರಣ ಭೇದಿಸಿರುವ ಬಾಗಲೂರು ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೀಪಾ (48) ಕೊಲೆಯಾದ ಮಹಿಳೆಯಾಗಿದ್ದು, ಕೊಲೆ ಮಾಡಿರುವ ಆರೋಪದಡಿ ಉತ್ತರ ಕರ್ನಾಟಕ ಮೂಲದ ಭೀಮರಾಯ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇಂದಿರಾ ನಗರದಲ್ಲಿ ವಾಸವಾಗಿದ್ದ ದೀಪಾ ಹೊಸಕೋಟೆಯಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಿತ್ಯ ಇಂದಿರಾ ನಗರದಿಂದ ಹೊಸಕೋಟೆಗೆ ಕ್ಯಾಬ್ ಮೂಲಕ ಪ್ರಯಾಣ ಮಾಡುತ್ತಿದ್ದ ದೀಪಾ ಹಾಗೂ ಭೀಮರಾಯ ನಡುವೆ ಆತ್ಮೀಯತೆ ಹೆಚ್ಚಾಗಿದೆ. ಈ ಮಧ್ಯೆ ನಂದಿಬೆಟ್ಟಕ್ಕೆ ಹೋಗಿ ಬರೋಣ ಎಂದು ಆರೋಪಿ ಭೀಮರಾಯ ಮಹಿಳೆಗೆ ಆಹ್ವಾನಿಸಿದ್ದ. ಇದಕ್ಕೆ ಮಹಿಳೆ ನಿರಾಕರಿಸಿದ್ದರು.
ಈ ಮಧ್ಯೆ ಏಕಾಏಕಿ ಮಹಿಳೆ ನಾಪತ್ತೆಯಾಗಿದ್ದರು. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಕಣ್ಮರೆ ಪ್ರಕರಣ ದಾಖಲಾಗಿತ್ತು. ಮಾ.4 ರಂದು ಬಾಗಲೂರಿನಲ್ಲಿ ಹತ್ಯೆಯಾದ ಸ್ಥಿತಿಯಲ್ಲಿ ದೀಪಾ ಅವರ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಾಗಲೂರು ಪೊಲೀಸರು ತನಿಖೆ ವೇಳೆ ಇಂದಿರಾನಗರದಲ್ಲಿ ನಾಪತ್ತೆಯಾಗಿದ್ದ ದೀಪಾ ಎಂಬುದನ್ನು ಪತ್ತೆ ಹಚ್ಚಿದ್ದರು.
ಇನ್ನೂ, ಕೊಲೆಯ ದಿನದಂದು ದೀಪಾ ಅವರಿಗೆ ಕರೆ ಮಾಡಿ ಭೀಮಾರಾಯನನ್ನು ಕರೆಯಿಸಿಕೊಂಡಿದ್ದರು. ಹಲಸೂರಿನ ಕೆಂಬ್ರಿಡ್ಜ್ ಲೇಔಟ್‍ನಲ್ಲಿಹೊಟೇಲ್ ಕರೆದೊಯ್ದಿದ್ದರು. ಆಗ ದೀಪಾ ಮತ್ತು ಆರೋಪಿ ಭೀಮರಾಯನ ಜೊತೆ ಮಾತುಕತೆ ನಡೆದಿದ್ದು, ದೀಪಾ ನನಗೆ ಯಾವುದೇ ಗೆಳೆತನ ಇಷ್ಟವಿಲ್ಲ. ಈ ಬಗ್ಗೆ ಒತ್ತಡ ಹೇರಿದರೆ ಮೊಬೈಲ್ ನಂಬರ್ ಬ್ಲಾಕ್ ಮಾಡುವೆ ಎಂದಿದ್ದಾಳೆ. ಇದರಿಂದ ಆಕ್ರೋಶಗೊಂಡ ಭೀಮರಾಯ ಕಾರಿನ ಜಾಕ್‍ನಿಂದಹೊಡೆದು ಹತ್ಯೆಮಾಡಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.