ಕೊನೆಗೂ ಲೋಕಾಯುಕ್ತ ಎದುರು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಜರು

ಬೆಂಗಳೂರು, ಮಾ.9: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ(ಕೆಎಸ್‍ಡಿಎಲ್) ರಾಸಾಯನಿಕ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ಹಾಜರಾದರು.
ನಿರೀಕ್ಷಣಾ ಜಾಮೀನು ಪಡೆದು 48 ಗಂಟೆಯೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕೆಂದು ನ್ಯಾಯಾಲಯ ಆದೇಶಿತ್ತು. ಅದರಂತೆ ಕೆ.ಮಾಡಾಳ್ ವಿರೂಪಾಕ್ಷಪ್ಪಅವರು ಗುರುವಾರ ಇಲ್ಲಿನ ಕರ್ನಾಟಕ ಲೋಕಾಯುಕ್ತ ಕಚೇರಿಗೆ ವಕೀಲ ಸಂದೀಪ್ ಪಾಟೀಲ್ ಅವರೊಂದಿಗೆ ಆಗಮಿಸಿ ತನಿಖಾಧಿಕಾರಿಗಳ ಕಡತಗಳಲ್ಲಿ ಸಹಿ ಮಾಡಿದರು.
ನನಗೆ ಕಾಯಿಲೆ: ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಮಾಡಾಳ್ ವಿರೂಪಾಕ್ಷಪ್ಪ, ‘ನನಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಹೆಚ್ಚಾಗಿ ತೊಂದರೆ ನೀಡಬೇಡಿ. ಲೋಕಾಯುಕ್ತ ಕಚೇರಿಗೆ ಹಾಜರಾಗುತ್ತೇನೆ’ ಎಂದು ಹೇಳಿದರು.
ಇದೇ ಪ್ರಕರಣ ಸಂಬಂಧ ಬುಧವಾರ ಲೋಕಾಯುಕ್ತ ಇನ್ಸ್‍ಪೆಕ್ಟರ್ ಮಹದೇವಯ್ಯ ನೇತೃತ್ವದ ಅಧಿಕಾರಿಗಳ ತಂಡವು ಮಾಡಾಳ್ ವಿರೂಪಾಕ್ಷಪ್ಪ ನಿವಾಸಕ್ಕೆ ಬಂದು ಪರಿಶೀಲನೆ ನಡೆಸಿದ್ದರು.