ಬಿಜೆಪಿಗೆ ಮುಜುಗರ ತಂದ ಮಾಡಾಳ್ ವಿರೂಪಾಕ್ಷಪ್ಪ ಸಂಭ್ರಮಾಚರಣೆ: ಹಲವು ನಾಯಕರ ಖಂಡನೆ
ವಿವರಣೆ ಕೇಳಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದ ನಂತರ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಅದ್ದೂರಿ ಸ್ವಾಗತ ಕೋರಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಪ್ರಕರಣ ಪಕ್ಷಕ್ಕೆ ಮುಜುಗರದ ಸಂಗತಿ ಎಂದು ಹೇಳಿದ್ದಾರೆ.
ಬುಧವಾರ ಚನ್ನರಾಯಪಟ್ಟಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ''ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕ ನಂತರ ಸಂಭ್ರಮಾಚರಣೆ ಮಾಡಿದ್ದು ಸರಿಯಲ್ಲ. ಭ್ರಷ್ಟಾಚಾರವನ್ನು ಬಿಜೆಪಿ ಸಹಿಸುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೂಪಾಕ್ಷಪ್ಪರಿಂದ ವಿವರಣೆ ಕೇಳಲಾಗುವುದು'' ಎಂದು ಹೇಳಿದ್ದಾರೆ.
''ವಿರೂಪಾಕ್ಷಪ್ಪ ಅವರಿಗೆ ಬಿಜೆಪಿ ನೋಟಿಸ್ ಜಾರಿ ಮಾಡಿದ್ದು, ವಿವರಣೆ ಕೇಳಿದೆ. ಪ್ರಕರಣ ಮುಜುಗರದ ಸಂಗತಿ. ಅದನ್ನು ನಾವು ನಿರಾಕರಿಸುವುದಿಲ್ಲ'' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಸಂಭ್ರಮಾಚರಣೆ ಸರಿಯಲ್ಲ. ಇದರ ಬಗ್ಗೆ ಅವರಿಗೆ ಈಗಾಗಲೇ ಸೂಚನೆ ಕೊಟ್ಟಿದ್ದಾಗಿ ಸಿಎಂ ಬೊಮ್ಮಾಯಿ ಗುರುವಾರ ತಿಳಿಸಿದ್ದಾರೆ.
''ನಮ್ಮ ಪಕ್ಷದ ಸಂಸ್ಕೃತಿ ಅಲ್ಲ''
ಇನ್ನು ಯಾದಗಿರಿಯ ಶಹಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ''ಮಾಡಾಳ್ ಅಂತಹವರ ಪರ ಜೈಕಾರ ಹಾಕಿ ಸಂಭ್ರಮಿಸೋದು ನಮ್ಮ ಪಕ್ಷದ ಸಂಸ್ಕೃತಿ ಅಲ್ಲ. ಅದು ಡಿಕೆ ಶಿವಕುಮಾರ್ ಕಾಂಗ್ರೆಸ್ ಸಂಸ್ಕೃತಿ, ಅದನ್ನ ಯಾರೂ ಅನುಸರಿಸಬಾರದು. ಡಿಕೆಶಿ ಜೈಲಿನಿಂದ ಹೊರ ಬಂದಾಗ ಅವರ ಬೆಂಬಲಿಗರು ಈ ರೀತಿ ಸಂಭ್ರಮಿಸಿದ್ದರು. ಆ ರೀತಿ ವೈಭವಿಕರಿಸೋದು ತಪ್ಪು. ಅದನ್ನ ಯಾರೂ ಮಾಡಬಾರದು'' ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.







