ಮಹಿಳೆಯನ್ನು ನಿಂದಿಸಿದ ಸಂಸದ ಮುನಿಸ್ವಾಮಿ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು: ಎಐಎಂಎಸ್‍ಎಸ್

ಬೆಂಗಳೂರು, ಮಾ. 9: ಕೋಲಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ವಸ್ತು ಪ್ರದರ್ಶನ ಉದ್ಘಾಟಿಸಿದ ಬಿಜೆಪಿ ಸಂಸದ ಮುನಿಸ್ವಾಮಿ, ಮಳಿಗೆಯೊಂದರಲ್ಲಿ ಮಾರಾಟ ಮಾಡುತ್ತಿದ್ದ ಒಬ್ಬ ಹೆಣ್ಣು ಮಗಳೊಡನೆ ಅಸಭ್ಯ ಹಾಗೂ ಅನುಚಿತವಾಗಿ ಮಾತನಾಡಿರುವುದನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‍ಎಸ್) ಖಂಡಿಸಿದೆ.
ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಮಹಿಳೆಯರ ಸಮಾನತೆ-ಸ್ವಾವಲಂಬನೆ- ಸ್ವಾತಂತ್ರ್ಯಗಳ ಬಗ್ಗೆ ಮಾತನಾಡುವ ಸಂಸದ ಮಹೋದಯರು ಸಾರ್ವಜನಿಕವಾಗಿ ಆಕೆಯ ವೈಯಕ್ತಿಕ ನಂಬಿಕೆಗಳ ಕುರಿತು ಎಲ್ಲೆ ಮೀರಿ ಮಾತನಾಡಿರುವುದು ಅಕ್ಷಮ್ಯ. ಜೊತೆಗೆ ಹಣೆಯಲ್ಲಿ ಕುಂಕುಮ ಇಲ್ಲದಿರುವುದರ ಬಗ್ಗೆ ಆಕ್ಷೇಪಣೆ ಎತ್ತಿ ಹೇಳಲು ಆ ಹೆಣ್ಣು ಮಗಳ ಗಂಡ ಮತ್ತು ಆಕೆ ತಂದೆಯ ಕುರಿತು ಮಾತನಾಡಿರುವುದು ಸಲ್ಲ ಎಂದು ಆಕ್ಷೇಪಿಸಿದೆ.
ಅಷ್ಟೇ ಅಲ್ಲದೆ, ಹಣದ ಆಮಿಷಕ್ಕೆ ಬಲಿಯಾಗಿ ಆ ಮಹಿಳೆ ಮತಾಂತರವಾಗಿರುವಳೆಂದೂ ಆರೋಪಿಸಿರುವುದು ಸಂಸದರಿಗೆ ಅನ್ಯಧರ್ಮದ ಬಗ್ಗೆ ಇರುವ ಅಸಹಿಷ್ಣುತೆಯನ್ನು ಬಯಲು ಮಾಡಿದೆ. ಇದೇಯೇ ಬಿಜೆಪಿಯ ‘ಭಾರತೀಯ ಸಂಸ್ಕೃತಿ'ಯ ವ್ಯಾಖ್ಯಾನ?. ಅಸಭ್ಯ, ಅವಾಚ್ಯ ಮಾತುಗಳನ್ನು ಆಡಿದ ಸಂಸದರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಹಾಗೂ ಸಂಸದರು ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕೆಂದು ಎಐಎಂಎಸ್‍ಎಸ್ ಪ್ರಕಟನೆಯಲ್ಲಿ ಆಗ್ರಹಿಸಿದೆ.
''ಮನುಸ್ಮೃತಿ ಹೆಚ್ಚೆನಿಸಿದರೆ ರಾಜಿನಾಮೆ ಕೊಟ್ಟು ಹೊರಬರಲಿ'':
‘ಕೋಲಾರದ ಸಂಸದ ಮುನಿಸ್ವಾಮಿಯವರ ವರ್ತನೆ ಖಂಡನೀಯ. ಇದು ಸರ್ವರ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಗೌರವಿಸುವ ಹಾಗೂ ಹೆಣ್ಣನ್ನು ತುಚ್ಛವಾಗಿ ಕಾಣುವ ಸ್ಮøತಿಗಳನ್ನು ವಿರೋಧಿಸಿ ಸಮಾನರಾಗಿ ಕಾಣುವ ಕಾನೂನು ರಚಿಸಿದ ಡಾ.ಅಂಬೇಡ್ಕರ್ ಅವರ ಧೈಯೋದ್ದೇಶಗಳಿಗೆ ಮಾಡಿರುವ ಅಪಚಾರ. ಸಂವಿಧಾನ ಕೊಟ್ಟಿರುವ ಸಮಾನತೆಯಿಂದಾಗಿ ಸಂಸದರಾಗಿರುವ ಮುನಿಸ್ವಾಮಿ ನಡೆದುಕೊಂಡ ರೀತಿ ಅವಮಾನಕರ. ಸಂವಿಧಾನಕ್ಕಿಂತ ಮನುಸ್ಮೃತಿ ಇವರಿಗೆ ಹೆಚ್ಚೆನಿಸಿದರೆ ಇವರು ರಾಜಿನಾಮೆ ಕೊಟ್ಟು ಹೊರಬರಲಿ’
-ದು.ಸರಸ್ವತಿ ಚಿಂತಕಿ, ಲೇಖಕಿ