ಬೈಪಡಿತ್ತಾಯ ದಂಪತಿಗೆ ‘ಶ್ರೀವಿದ್ಯಾಮಾನ್ಯ ಯಕ್ಷಕಲಾ’ ಪ್ರಶಸ್ತಿ

ಉಡುಪಿ, ಮಾ.9: ಪಲಿಮಾರು ಮಠದ ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯ ತೀರ್ಥರ ಹೆಸರಿನಲ್ಲಿ ಅವರ ಶಿಷ್ಯರಾದ ಹಾಲಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥರು ಕೊಡಮಾಡುವ ಈ ಸಲದ ‘ಶ್ರೀವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ’ಕ್ಕೆ ತೆಂಕುತಿಟ್ಟಿನ ಕಲಾವಿದ ದಂಪತಿಗಳಾದ ಹರಿನಾರಾಯಣ ಬೈಪಡಿತ್ತಾಯ- ಲೀಲಾವತಿ ಬೈಪಡಿತ್ತಾಯ ಆಯ್ಕೆಯಾಗಿದ್ದಾರೆ.
ಲೀಲಾವತಿ ಬೈಪಡಿತ್ತಾಯ ಅವರು ಯಕ್ಷಗಾನ ಕ್ಷೇತ್ರದ ಅಪರೂಪದ ಮಹಿಳಾ ಭಾಗವತರಾಗಿ ಖ್ಯಾತಿಯನ್ನು ಪಡೆದಿದ್ದರೆ, ಹರಿನಾರಾಯಣ ಬೈಪಡಿತ್ತಾಯರು ಪ್ರಸಿದ್ಧ ಮದ್ದಲೆವಾದಕರು.
ಪ್ರಶಸ್ತಿ ಪ್ರದಾನ ಸಮಾರಂಭವು ಮುಂದಿನ ಎ.6ರ ಗುರುವಾರ ಪಲಿಮಾರಿನಲ್ಲಿರುವ ಮೂಲ ಮಠದಲ್ಲಿ ಜರಗಲಿದೆ. ಪ್ರಶಸ್ತಿಯು 50,000 ರೂ. ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ ಎಂದು ಪಲಿಮಾರು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಶಸ್ತಿ ಪುರಸ್ಕೃತರ ಆಯ್ಕೆಯಲ್ಲಿ ಯಕ್ಷಗಾನ ಕಲಾರಂಗವು ಸಹಕರಿಸಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





