ಮಹೇಂದ್ರ ಸಿಂಗ್ ಧೋನಿ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಲೇರಿದ ಝೀ ಮೀಡಿಯಾ: ಕಾರಣವೇನು?

ಚೆನ್ನೈ,ಮಾ.8: ಮಾಜಿ ಕ್ರಿಕೆಟಿಗ ಎಂ.ಎಸ್. ಧೋನಿ ಅವರು ತನ್ನ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ಪ್ರಶ್ನಾವಳಿಗಳನ್ನು ಮಂಡಿಸಿರುವುದನ್ನು ಆಕ್ಷೇಪಿಸಿ ಝಿ ಟಿವಿ ವಾಹಿನಿಯ ಮಾಲಕ ಸಂಸ್ಥೆ ಝೀ ಮೀಡಿಯಾ ಬುಧವಾರ ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಈ ರೀತಿಯ ಪ್ರಶ್ನಾವಳಿಗಳಲ್ಲಿ ಅರ್ಜಿದಾರನು ಲಿಖಿತವಾಗಿ ಸಲ್ಲಿಸಿರುವ ಪ್ರಶ್ನೆಗಳಿಗೆ ಪ್ರತಿವಾದಿಯು ಲಿಖಿತ ಉತ್ತರಗಳನ್ನು ಪ್ರತಿಜ್ಞಾಪೂರ್ವಕವಗಿ ನೀಡಬೇಕಾಗುತ್ತದೆ.
2014ರಲ್ಲಿನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಕೂಟದಲ್ಲಿ ಕ್ರಿಕೆಟಿಗ ಎಂ.ಎಸ್.ಧೋನಿ ಅವರು ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ನಲ್ಲಿ ಶಾಮೀಲಾಗಿದ್ದರೆಂದು ಐಪಿಎಸ್ ಅಧಿಕಾರಿ ಜಿ.ಸಂಪತ್ ಕುಮಾರ್ ಆರೋಪಿಸಿದ್ದನ್ನು ಝಿ ಸುದ್ದಿವಾಹಿನಿಯು ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆ ವರ್ಷವೇ ಧೋನಿ ಅವರು ಜಿ. ಸಂಪತ್ ಕುಮಾರ್ ಹಾಗೂ ಝಿ ಸುದ್ದಿವಾಹಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ತರುವಾಯ ಝಿ ಮೀಡಿಯಾ ಹಾಗೂ ಸಂಪತ್ ಕಮಾರ್ ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ನೀಡಿದ್ದರು.
ಆದರೆ, ಧೋನಿ ಅವರು ಆನಂತರ ಹೈಕೋರ್ಟ್ ಮೆಟ್ಟಲೇರಿ ಝಿ ಮೀಡಿಯಾಕ್ಕೆ 17 ಪ್ರಶ್ನೆಗಳನ್ನೊಳಗೊಂಡ ಪ್ರಶ್ನಾವಳಿಯೊಂದನ್ನು ಸಲ್ಲಿಸುವುದಕ್ಕೆ ಅನುಮತಿ ಕೋರಿದ್ದರು. ಝಿ ಮೀಡಿಯಾ ಕಂಪೆನಿಯು ಸಲ್ಲಿಸಿದ ಲಿಖಿತ ಹೇಳಿಕೆಯು ‘ ಸಾಮಾನ್ಯವಾದುದಾಗಿತ್ತು’’ ಹಾಗೂ ಅದು ಹೊರಿಸಲಾದ ಆರೋಪಗಳಿಗೆ ಸಂಬಂಧಪಟ್ಟಂತಹ ನಿರ್ದಿಷ್ಟ ಉತ್ತರಗಳನ್ನು ಒಳಗೊಂಡಿರಲಿಲ್ಲವೆಂದು ಧೋನಿ ಅಸಮಾಧಾನ ವ್ಯಕ್ತಪಡಿಸಿದ್ದರು ಜುಲೈ ತಿಂಗಳಲ್ಲಿ ನ್ಯಾಯಮೂರ್ತಿ ಎ.ಎ ನಕ್ಕೀರನ್ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠವು ಧೋನಿ ಅವರಿಗೆ ಪ್ರಶ್ನಾವಳಿಗಳನ್ನು ಸಲ್ಲಿಸುವುದಕ್ಕೆ ಅವಕಾಶ ನೀಡಿದ್ದರು.
ಆನಂತರ ಝಿ ಮೆಡಿಯಾ ಸಂಸ್ಥೆಯು ನ್ಯಾಯಾಲಯದ ಮೆಟ್ಟಲೇರಿ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಬದಿಗಿರಿಸಬೇಕೆಂದು ಕೋರಿತ್ತು. ಆದರೆ,ನ್ಯಾಯಮೂರ್ತಿ ಜಿ.ಚಂದ್ರಶೇಖರನ್ ಅವರು ನವೆಂಬರ್ 11ರಂದು ಅರ್ಜಿಯನ್ನು ತಳ್ಳಿಹಾಕಿದ್ದರು.
ಆದೇಶವನ್ನು ಬದಿಗಿರಿಸಲು ಬೇಕಾದಂತಹ ಸೂಕ್ತ ಕಾರಣಗಳನ್ನು ದೃಢಪಡಿಸಲು ಝೀ ಮೀಡಿಯಾ ಕಂಪೆನಿಯು ವಿಫಲವಾಗಿದೆಯೆಂದು ನ್ಯಾಯಮೂರ್ತಿ ಚಂದ್ರಶೇಖರನ್ ಆದೇಶದಲ್ಲಿ ಆಭಿಪ್ರಾಯಿಸಿದ್ದರು. ಓರ್ವಏಕಸದಸ್ಯ ನ್ಯಾಯಾಧೀಶನ ಆದೇಶವನ್ನು ಇನ್ನೋರ್ವ ಏಕಸದಸ್ಯ ನ್ಯಾಯಪೀಠವು ತಳ್ಳಿಹಾಕಲು ಸಾಧ್ಯವಿಲ್ಲವೆಂಬುದನ್ನು ಕೂಡಾ ಅವರು ಈ ಸಂದರ್ಭದಲ್ಲಿ ಪ್ರತಿಪಾದಿಸಿದ್ದರು
ಆನಂತರ ಧೋನಿ ಅವರು ಪ್ರತ್ಯೇಕವಾಗಿ ಕಳೆದ ನವೆಂಬರ್ ನಲ್ಲಿ ಕುಮಾರ್ ವಿರುದ್ಧ ಮದ್ರಾಸ್ ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆಯ ಅರ್ಜಿಯನ್ನು ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಹಾಗೂ ಮದ್ರಾಸ್ ಹೈಕೋರ್ಟ್ ವಿರುದ್ದ ಕುಮಾರ್ ಅವರು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾಗಿಯೂ ಧೋನಿ ಈ ಸಂದರ್ಭದಲ್ಲಿ ಆಪಾದಿಸಿದ್ದರು.
ಧೋನಿ ವಿರುದ್ಧ ಝೀ ಮೀಡಿಯಾ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯಲ್ಲಿ, ಪ್ರಶ್ನಾವಳಿಗಳನ್ನು ಸಲ್ಲಿಸುವುದಕ್ಕೆ ಅವಕಾಶ ನೀಡಿದ ಮದ್ರಾಸ್ ಹೈಕೋರ್ಟ್ ನ ನವೆಂಬರ್ 11ರ ಆದೇಶವು ಪೂರ್ವಾಗ್ರಹ ಪೀಡಿತವಾದುದಾಗಿದೆ ಹಾಗೂ ನ್ಯಾಯದ ಪತನವಾಗಿದೆ ಎಂದು ಆಕ್ಷೇಪಿಸಿತ್ತು.
ವಿಚಾರಣೆಯ ಸಂದರ್ಭದಲ್ಲಿ ನಡೆಸಲಾಗುವ ಪಾಟಿ ಸವಾಲಿನ ವೇಳೆ ಕೇಳಬೇಕಾದ ಪ್ರಶ್ನಾವಳಿಗಳನ್ನೇ ಈ ಧೋನಿಯವರು ಸಲ್ಲಿಸಿದ ಪ್ರಶ್ನಾವಳಿ ಒಳಗೊಂಡಿತ್ತೆಂದು ಸುದ್ದಿವಾಹಿನಿಯು ಆಪಾದಿಸಿತ್ತು.
ಬುಧವಾರದಂದು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಮೂರ್ತಿಗಳಾದ ಆರ್.ಮಹಾದೇವನ್ ಹಾಗೂ ಮೊಹಮ್ಮದ್ ಶಫೀಕ್ ಅವರು ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸಲು ನಿರಾಕರಿಸಿದ್ದಾರೆಂದು ‘ಲೈವ್ ಲಾ’ ಕಾನೂನು ಸುದ್ದಿಜಾಲ ತಾಣ ವರದಿ ಮಾಡಿದೆ.







