ಕಾಂಗ್ರೆಸ್ ನಾಯಕರು ಬೇಲ್ ಮೇಲಿದ್ದಾರೆ: ಜೆ.ಪಿ.ನಡ್ಡಾ ವಾಗ್ದಾಳಿ

ಬೆಂಗಳೂರು, ಮಾ.9: ರಾಜ್ಯದ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರಕಾರವು 7ಸಾವಿರ ಕೋಟಿ ರೂ.ಗಳ ಒದಗಿಸಿದೆ. ರಾಷ್ಟ್ರೀಯ ಹೆದ್ದಾರಿಗಳಿಗೆ 4 ಸಾವಿರ ಕೋಟಿ ರೂ.ಮೀಸಲಿಟ್ಟಿದೆ. ಇತ್ತೀಚೆಗಷ್ಟೇ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಲೋಕಾರ್ಪಣೆ. ಆ ಮೂಲಕ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ ಪಣ ತೊಟ್ಟಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಗುರುವಾರ ಕೆ.ಆರ್.ಪುರ ಕ್ಷೇತ್ರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಾರ್ವಜನಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಲಜೀವನ್ ಮಿಷನ್ ಯೋಜನೆಯಡಿ ಅಗತ್ಯ ಅನುದಾನ ಒದಗಿಸಲಾಗುತ್ತಿದೆ. ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2, ಕೆಂಪೇಗೌಡರ ಪ್ರತಿಮೆ ಅನ್ನು ಲೋಕಾರ್ಪಣೆ ಮಾಡಲಾಗಿದೆ. ತುಮಕೂರಿನಲ್ಲಿ ಎಚ್‍ಎಎಲ್ ಹೆಲಿಕಾಪ್ಟರ್ ತಯಾರಿಸುವ ಕಾರ್ಖಾನೆ ಆರಂಭಿಸಿದ್ದೇವೆ. ವಂದೇ ಭಾರತ್ ರೈಲನ್ನು ಒದಗಿಸಲಾಗಿದೆ. ಶೂನ್ಯ ಬಡ್ಡಿ ದರದಲ್ಲಿ ಬಡವರು, ರೈತರಿಗೆ ಸಾಲ ನೀಡಲಾಗುತ್ತಿದೆ ಎಂದು ವಿವರಿಸಿದರು.
ಜೆಡಿಎಸ್-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು, ಕೋಮುವಾದ, ಹಗರಣಗಳು, ಕುಟುಂಬ ರಾಜಕಾರಣ ನಡೆಸುತ್ತಾರೆ. ಕಾಂಗ್ರೆಸ್ ಮುಖಂಡರು ಹಗರಣಗಳಲ್ಲಿ ಸಿಲುಕಿದ್ದಾರೆ, ಜೆಡಿಎಸ್ ನಾಯಕರು ಸಹ ಹಗರಣಗಳಲ್ಲಿ ಪಾಲುದಾರರಾಗಿದ್ದಾರೆ. ಜೆಡಿಎಸ್ ಕುಟುಂಬಕ್ಕೆ ಆದ್ಯತೆ ಕೊಡುವ ಪಕ್ಷ. ಕಾಂಗ್ರೆಸ್ ಕುಟುಂಬ ರಾಜಕಾರಣದ ಪಕ್ಷ. ಕಾಂಗ್ರೆಸ್ ನಾಯಕರು ಬೇಲ್ ಮೇಲಿದ್ದಾರೆ. ಜೆಡಿಎಸ್‍ಗೆ ಮತ ಕೊಟ್ಟರೆ ಕಾಂಗ್ರೆಸ್‍ಗೆ ಕೊಟ್ಟ ಹಾಗೆ ಎಂದು ನಡ್ಡಾ ತಿಳಿಸಿದರು
ಭೈರತಿ ಕಾರ್ಯಕ್ಕೆ ಮೆಚ್ಚುಗೆ: ಭೈರತಿ ಬಸವರಾಜ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಭಾಷಣದ ಮಧ್ಯೆಯೇ ಭೈರತಿ ಬಸವರಾಜ ಅವರನ್ನು ಕರೆದು ಕೈ ಹಿಡಿದು ಜೆ.ಪಿ.ನಡ್ಡಾ ಬೆನ್ನು ತಟ್ಟಿದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಯಾರೆಲ್ಲ ಪೇ ಸಿಎಂ, ಎಟಿಎಂ ಸಿಎಂ ಆಗಿದ್ದರು ಎಂದು ನೋಡಿಕೊಳ್ಳಿ. ಕಾಂಗ್ರೆಸ್‍ನವರು ಈಗ ಎಲ್ಲರೂ ಬೇಲ್ ಮೇಲೆ, ಜೈಲಲ್ಲಿ ಇದ್ದಾರೆ. ಇಂತಹವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಇವತ್ತು ಜೆಡಿಎಸ್ ಪಕ್ಷ ಕಾಂಗ್ರೆಸ್ ನ ‘ಬಿ’ ಟೀಮ್. ಕಾಂಗ್ರೆಸ್-ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೂ ಮೂರು ದಿನ ಇರಲ್ಲ ಎಂದು ಟೀಕಿಸಿದರು.
ಈಗಾಗಲೇ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ, ಡಿಕೆಶಿ ಟವಲ್ ಹಾಕೊಂಡು ಕೂತಿದ್ದಾರೆ. ಇನ್ನು ಎರಡು ತಿಂಗಳಲ್ಲಿ ಚುನಾವಣೆ ಬರುತ್ತಿದೆ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಮತ್ತೊಮ್ಮೆ ಬೊಮ್ಮಾಯಿ ಆಡಳಿತ ಬರಬೇಕು ಎಂದು ಅವರು ಕರೆ ನೀಡಿದರು.
ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಮಾತನಾಡಿ, ತಮಿಳುನಾಡಿನಲ್ಲೂ ಡಿಎಂಕೆ ಹಾಗೂ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಾರೆ. ಅಲ್ಲಿ ಪ್ರತಿ ಮನೆಗೆ 1ಸಾವಿರ ರೂ. ಕೊಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಈವರೆಗೆ ಕೊಟ್ಟಿಲ್ಲ. ಇಲ್ಲಿಯೂ 2ಸಾವಿರ ರೂ. ನೀಡುವ ವಾಗ್ವಾನ ನೀಡಿದ್ದು, ಅವರನ್ನು ನಂಬಬೇಡಿ ಎಂದು ಹೇಳಿದರು.
ಸಚಿವರಾದ ಬಿ.ಎ.ಬಸವರಾಜ(ಬೈರತಿ), ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಮುನಿರತ್ನ, ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಗೋಪಿನಾಥ್ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
.
ಜೆ.ಪಿ.ನಡ್ಡಾಗೆ ತಟ್ಟಿದ ಸಂಚಾರ ದಟ್ಟಣೆ ಬಿಸಿ:
ಕೆ.ಆರ್.ಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಭೆಯಲ್ಲಿ ಪಾಲ್ಗೊಳ್ಳಲು ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ಕೆ.ಆರ್.ಪುರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಸಂಚಾರ ದಟ್ಟಣೆಯ ಬಿಸಿ ತಟ್ಟಿತು. ಕೆ.ಆರ್.ಪುರದಲ್ಲಿರುವ ಬಿಬಿಎಂಪಿ ಕಚೇರಿಯಿಂದ ಕಾಲೇಜು ಮೈದಾನದವರೆಗೆ ರೋಡ್ ಶೋ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಜೆ.ಪಿ.ನಡ್ಡಾ ರೋಡ್ ಶೋ ನಡೆಸದೆ ನೇರವಾಗಿ ಸಾರ್ವಜನಿಕ ಸಭೆಯ ವೇದಿಕೆಗೆ ಆಗಮಿಸಿದರು.