ಇಂಡೊನೇಶ್ಯ: ಫುಟ್ಬಾಲ್ ಕ್ರೀಡಾಂಗಣ ದುರಂತ ಪ್ರಕರಣ; ಇಬ್ಬರು ಅಧಿಕಾರಿಗಳಿಗೆ ಜೈಲು ಶಿಕ್ಷೆ

ಸುರಬಯಾ (ಇಂಡೊನೇಶ್ಯ) ಮಾ.10: ಜಗತ್ತಿನ ಕ್ರೀಡಾ ಇತಿಹಾಸದಲ್ಲೇ ಸಂಭವಿಸಿದಂತಹ ಅತ್ಯಂತ ಭೀಕರ ಕ್ರೀಡಾಂಗಣ ದುರಂತವೆಂದು ಪರಿಗಣಿಸಲಾದ ಪ್ರಕರಣವೊಂರಲ್ಲಿ ಇಂಡೊನೇಶ್ಯದ ನ್ಯಾಯಾಲಯವು ಗುರುವಾರ ಇಬ್ಬರು ಫುಟ್ಬಾಲ್ ಪಂದ್ಯದ ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷದ ಅಕ್ಟೊಬರ್ನಲ್ಲಿ ಪೂರ್ವ ಜಾವಾ ದ್ವೀಪದ ನಗರ ಮಲಾಂಗ್ನ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆಯಲ್ಲಿ 135 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಫುಟ್ಬಾಲ್ ಪಂದ್ಯದ ವೇಳೆ ಆಟದ ಬಯಲಿಗೆ ನುಗ್ಗಿದ ಬೆಂಬಲಿಗರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದಾಗ ದುರಂತ ಸಂಭವಿಸಿತ್ತು.
ಈ ಸಂದರ್ಭದಲ್ಲಿ ನೂರಾರು ಮಂದಿ ಕಿರಿದಾದ ನಿರ್ಗಮನ ದ್ವಾರದೆಡೆಗೆ ಧಾವಿಸಿದ್ದರಿಂದ ಕಾಲ್ತುಳಿತವುಂಟಾಗಿತ್ತು. ಹಲವಾರು ಮಂದಿ ಕಾಲ್ತುಳಿತದಿಂದ ಸಾವನ್ನಪ್ಪಿದ್ದರೆ, ಇನ್ನು ಉಸಿರುಗಟ್ಟಿ ಆಸುನೀಗಿದ್ದರು. ಮೃತರಲ್ಲಿ 40ಕ್ಕೂ ಅಧಿಕ ಮಂದಿ ಮಕ್ಕಳೆಂದು ತಿಳಿದುಬಂದಿದೆ.
ಪಂದ್ಯದ ಸಂಘಟಕರಾದ ಅಬ್ದುಲ್ ಹಾರಿಸ್ ಅವರನ್ನು ನಿರ್ಲಕ್ಷದ ಆರೋಪದಲ್ಲಿ ಅಪರಾಧಿಯೆಂದು ಪರಿಗಣಿಸಿ ಸುರಬಯಾ ನಗರ ನ್ಯಾಯಾಲಯವು 18 ತಿಂಗಳು ಜೈಲು ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ. ಆರೋಪಿಗೆ ಆರು ವರ್ಷಗಳಿಂದ ಎಂಟು ತಿಂಗಳುಗಳವರೆಗೆ ಜೈಲು ಶಿಕ್ಷೆ ವಿಧಿಸಬೇಕೆಂದು ಪ್ರಾಸಿಕ್ಯೂಶನ್ ವಾದಿಸಿತ್ತು.
‘‘ ಪ್ರತಿವಾದಿ ಅಬ್ದುಲ್ ಹಾರಿಸ್ಗೆ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸುತ್ತಿದ್ದೇನೆ’’ ಎಂದು ಸುರಬಿಯಾ ನಗರ ನ್ಯಾಯಾಲಯದ ನ್ಯಾಯಾಧೀಶ ಅಬು ಅಹಮದ್ ಸಿದಿಕಿ ಅಮ್ಸಿಯಾ ತೀರ್ಪು ನೀಡುತ್ತಾ ತಿಳಿಸಿದರು.
ಇಂಡೊನೇಶ್ಯ ಫುಟ್ಬಾಲ್ ದುರಂತಕ್ಕೆ ಸಂಬಂಧಿಸಿ ನೀಡಲಾದ ಮೊದಲ ತೀರ್ಪು ಇದಾಗಿದೆ. ಕ್ರೀಡಾಂಗಣ ಭದ್ರತಾ ಅಧಿಕಾರಿ ಸುಕೊ ಸುತ್ರಿಷ್ಣೊ ಕೂಡಾ ಪ್ರಕರಣದಲ್ಲಿ ಅಪರಾಧಿಯೆಂದು ನ್ಯಾಯಪೀಠ ತೀರ್ಪು ನೀಡಿದ್ದು ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.







