ಉಕ್ರೇನಿನ ಝಾಪೊರಿಝಿಯಾ ಸ್ಥಾವರದ ಕುರಿತು ವಿಶ್ವಸಂಸ್ಥೆ ಪರಮಾಣು ಮುಖ್ಯಸ್ಥರ ಆತಂಕ

ಜಿನೇವಾ,ಮಾ.9: ಗುರುವಾರ ಉಕ್ರೇನ್ನ ಝಾಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರ (ಝಡ್ಎನ್ಪಿಪಿ)ದಲ್ಲಿ ಮತ್ತೊಮ್ಮೆ ಬಾಹ್ಯ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ವಿಶ್ವಸಂಸ್ಥೆಯ ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ (ಐಎಇಎ)ಯ ಮುಖ್ಯಸ್ಥ ರಫಾಯೆಲ್ ಗ್ರೋಸಿ ಅವರು ರಕ್ಷಣಾ ವಲಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ತನ್ನದೇ ನೇತೃತ್ವದ ಐಎಇಎ ಮಾತ್ರ ಏನೂ ಆಗಿಯೇ ಇಲ್ಲವೆಂಬಂತೆ ಇರುವುದಕ್ಕೆ ಅವರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
ಬುಧವಾರ ಜನರು ನಿದ್ರೆಯಲ್ಲಿದ್ದಾಗ ರಷ್ಯದ ಪಡೆಗಳು ಉಕ್ರೇನಿನ ಹಲವಾರು ನಗರಗಳ ಮೇಲೆ ದಾಳಿಗಳನ್ನು ನಡೆಸಿದ್ದು,ಕನಿಷ್ಠ ಆರು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ವಿದ್ಯುತ್ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು,ಇದರಿಂದಾಗಿ ಕಳೆದ ವರ್ಷ ಉಕ್ರೇನ್ ದಾಳಿಯ ಬಳಿಕ ಆರನೇ ಬಾರಿ ಯುರೋಪಿನ ಅತ್ಯಂತ ದೊಡ್ಡ ಪರಮಾಣು ಸ್ಥಾವರವಾಗಿರುವ ಝಡ್ಎನ್ಪಿಪಿ ಗಾಢಾಂಧಕಾರದಲ್ಲಿ ಮುಳುಗಿದೆ.
ಈ ಹಿಂದಿನ ಸಲ 2022,ನ.23ರಂದು ಸ್ಥಾವರವು ಇದೇ ಸ್ಥಿತಿಯನ್ನು ಅನುಭವಿಸಿತ್ತು ಎಂದು ಗುರುವಾರ ಐಎಇಎ ನಿರ್ದೇಶಕರ ಮಂಡಳಿ ಸಭೆಯಲ್ಲಿ ಗ್ರೋಸಿ ತಿಳಿಸಿದರು.
‘ಇಂತಹ ಘಟನೆಗಳು ಸಂಭವಿಸುವುದನ್ನು ತಡೆಯಲು ನಾವೇನು ಮಾಡುತ್ತಿದ್ದೇವೆ? ನಾವು ಐಎಇಎ ಆಗಿದ್ದೇವೆ,ಪರಮಾಣು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಲು ನಾವಿದ್ದೇವೆ. ಪ್ರತಿ ಬಾರಿಯೂ ನಾವು ದಾಳವೊಂದನ್ನು ಉರುಳಿಸುತ್ತೇವೆ. ಪದೇ ಪದೇ ಇದು ಮುಂದುವರಿಯಲು ನಾವು ಅನುಮತಿಸಿದರೆ ಕೊನೆಗೊಂದು ದಿನ ನಮ್ಮ ಅದೃಷ್ಟವು ಕೈಕೊಡುತ್ತದೆ ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಗಂಭೀರ ಅವಘಡಗಳ ಅಪಾಯವನ್ನು ತಗ್ಗಿಸಲು ಐಎಇಎ ಉಕ್ರೇನಿನ ಎಲ್ಲ ನಾಲ್ಕೂ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ತಜ್ಞರ ತಂಡಗಳನ್ನು ನಿಯೋಜಿಸಿದೆ.
ರಷ್ಯದ ವಶದಲ್ಲಿರುವ ಝಡ್ಎನ್ಪಿಪಿ ಅನ್ನು ಡೀಸೆಲ್ ಜನರೇಟರ್ಗಳ ಮೂಲಕ 10 ದಿನಗಳ ಕಾಲ ನಡೆಸಬಹುದು.
ಶೀತಲೀಕರಣ ವ್ಯವಸ್ಥೆಗಳನ್ನು ನಡೆಸಲು ಮತ್ತು ಕರಗುವಿಕೆಯನ್ನು ತಪ್ಪಿಸಲು ನಿರಂತರ ವಿದ್ಯುತ ಪೂರೈಕೆಯ ಅಗತ್ಯವಿದೆ ಮತ್ತು ಝಾಪೊರಿಝಿಯಾದಲ್ಲಿ ದುರಂತ ಸಂಭವಿಸುವ ಸಾಧ್ಯತೆಯ ಭೀತಿ ಉಳಿದುಕೊಂಡಿದೆ.
ಹಿಂದಿನ ದಾಳಿಗಳಲ್ಲಿಯಂತೆ ಈ ಸಲವೂ ವಿದ್ಯುತ್ ಸ್ಥಗಿತಕ್ಕೆ ರಷ್ಯಾ ಮತ್ತು ಉಕ್ರೇನ್ ಪರಸ್ಪರರನ್ನು ದೂಷಿಸಿವೆ.
ಉಭಯ ದೇಶಗಳ ನಡುವೆ ಸ್ಥಾವರದ ಮೇಲೆ ಅಥವಾ ಸ್ಥಾವರದಿಂದ ಗುಂಡು ಹಾರಿಸುವುದಿಲ್ಲ ಹಾಗೂ ಭಾರೀ ಶಸ್ತ್ರಾಸ್ತ್ರಗಳನ್ನು ತೆಗೆದುಹಾಕಲಾಗುವುದು ಎಂಬ ಒಪ್ಪಂದವನ್ನು ಮಾಡಿಸಲು ಗ್ರೋಸಿ ಸುದೀರ್ಘ ಸಮಯದಿಂದ ಪ್ರಯತ್ನಿಸುತ್ತಲೇ ಇದ್ದಾರೆ.
ದಾಳಿಯ ಬಳಿಕ ಝಡ್ಎನ್ಪಿಪಿಗೆ ವಿದ್ಯುತ್ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು,ಡೀಸೆಲ್ ಜನರೇಟರ್ಗಳನ್ನು ಅವಲಂಬಿಸಿದೆ. ರಿಯಾಕ್ಟರ್ ಇಂಧನ ಅತಿಯಾಗಿ ಬಿಸಿಗೊಳ್ಳುವುದರಿಂದ ಕರಗುವಿಕೆಯನ್ನು ತಡೆಯಲು ಇದು ರಕ್ಷಣೆಯ ಅಂತಿಮ ಮಾರ್ಗವಾಗಿದೆ.







