ಟೊರಾಂಟೊದ ಶಾಲೆಗಳಲ್ಲಿ ಜಾತಿ ದೌರ್ಜನ್ಯ ಅಸ್ತಿತ್ವದಲ್ಲಿ: ಒಪ್ಪಿಕೊಂಡ ಜಿಲ್ಲಾ ಶಾಲಾ ಮಂಡಳಿ

ಟೊರಾಂಟೊ (ಕೆನಡ), ಮಾ. 9: ಕೆನಡದ ಅತಿ ದೊಡ್ಡ ನಗರ ಟೊರಾಂಟೊದ ಶಾಲೆಗಳಲ್ಲಿ ಜಾತಿ ತಾರತಮ್ಯ ಚಾಲ್ತಿಯಲ್ಲಿದೆ ಎನ್ನುವುದನ್ನು ನಗರದ ಜಿಲ್ಲಾ ಶಾಲಾ ಮಂಡಳಿ ಒಪ್ಪಿಕೊಂಡಿದೆ ಎಂದು ‘ಗ್ಲೋಬ್ ಆ್ಯಂಡ್ ಮೇಲ್’ ವರದಿ ಮಾಡಿದೆ.
ಜಾತಿ ತಾರತಮ್ಯ ಮತ್ತು ದೌರ್ಜನ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಕಾರ್ಯಕ್ರಮವೊಂದನ್ನು ರೂಪಿಸಲು ನೆರವು ನೀಡುವಂತೆ ಅದು ಓಂಟಾರಿಯೊ ಮಾನವಹಕ್ಕುಗಳ ಆಯೋಗಕ್ಕೆ ಮನವಿ ಮಾಡಿದೆ ಎಂದು ವರದಿ ತಿಳಿಸಿದೆ.
ಶಾಲೆಗಳಲ್ಲಿ ಜಾತಿ ತಾರತಮ್ಯ ಇದೆ ಎನ್ನುವ ನಿರ್ಣಯದ ಬಗ್ಗೆ ಬುಧವಾರ ರಾತ್ರಿ ಮತದಾನ ನಡೆಯಿತು. 16 ಟ್ರಸ್ಟೀಗಳು ತಾರತಮ್ಯ ಇದೆ ಎನ್ನುವುದರ ಪರವಾಗಿ ಮತ ಹಾಕಿದರೆ, ಐವರು ಇಲ್ಲ ಎನ್ನುವುದರ ಪರವಾಗಿ ಮತ ಹಾಕಿದರು.
ಇದೇ ಸಂದರ್ಭದಲ್ಲಿ, ದಲಿತರ ಕ್ರಿಯಾ ಗುಂಪೊಂದನ್ನು ರಚಿಸಲು ಕೂಡ ಮಂಡಳಿಯು ಒಪ್ಪಿಕೊಂಡಿತು ಎಂದು ಪತ್ರಿಕೆ ವರದಿ ಮಾಡಿದೆ. ಕೆನಡದಲ್ಲಿ ಜಾತಿ ದೌರ್ಜನ್ಯ ಇದೆ ಎನ್ನುವುದನ್ನು ಶಾಲಾ ಆಡಳಿತ ಮಂಡಳಿಯೊಂದು ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ.
ಮಕ್ಕಳಿಗೆ ದೈಹಿಕ, ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ದಲಿತ ಹೆತ್ತವರು ಹೇಳಿದ್ದಾರೆ: ಟೊರಾಂಟೊ ಜಿಲ್ಲಾ ಶಾಲಾ ಮಂಡಳಿಯ ಟ್ರಸ್ಟೀ ಯಾಲಿನಿ ರಾಜಕುಲಸಿಂಗಮ್
ಜಾತಿ ದೌರ್ಜನ್ಯಕ್ಕೆ ಒಳಗಾದ ಜನರು ತಮ್ಮ ದೌರ್ಜನ್ಯದ ವಿಷಯಗಳನ್ನು ಹೇಳಲು ಮುಂದೆ ಬರುವುದಿಲ್ಲ, ಯಾಕೆಂದರೆ ಈ ಸಮಸ್ಯೆಯನ್ನು ನಿಭಾಯಿಸುವ ಯಾವ ವ್ಯವಸ್ಥೆಯೂ ಚಾಲ್ತಿಯಲ್ಲಿಲ್ಲ ಎಂದು ಟೊರಾಂಟೊ ಜಿಲ್ಲಾ ಶಾಲಾ ಮಂಡಳಿಯ ಟ್ರಸ್ಟೀ ಯಾಲಿನಿ ರಾಜಕುಲಸಿಂಗಮ್ ಪತ್ರಿಕೆಯೊಂದಿಗೆ ಮಾತನಾಡುತ್ತಾ ಹೇಳಿದರು. ‘‘ಜಾತಿ ದೌರ್ಜನ್ಯವನ್ನು ದಾಖಲಿಸಲು ಯಾವುದೇ ವ್ಯವಸ್ಥೆಯಿಲ್ಲ. ಹಾಗಾಗಿ, ಅಂಥ ದೌರ್ಜನ್ಯಗಳು ಜಾತಿ ದೌರ್ಜನ್ಯಗಳಾಗಿ ದಾಖಲಾಗುವುದಿಲ್ಲ. ಆದರೆ, ಇದರ ಅರ್ಥ ಜಾತಿ ದೌರ್ಜನ್ಯಗಳು ನಡೆಯುವುದಿಲ್ಲವೆಂದಲ್ಲ’’ ಎಂದರು.
ಮಾನವಹಕ್ಕುಗಳ ಆಯೋಗದೊಂದಿಗೆ ಮಂಡಳಿಯ ಭಾಗೀದಾರಿಕೆಯು ಈಗ ಈ ನಿಟ್ಟಿನಲ್ಲಿ ಪರಿಹಾರವೊಂದನ್ನು ನೀಡಲಿದೆ ಎಂದು ಯಾಲಿನಿ ಹೇಳಿದರು.
ಸಿಯಾಟಲ್ ನಗರದಲ್ಲಿ ಜಾತಿ ತಾರತಮ್ಯವನ್ನು ನಿಷೇಧಿಸಲು ಆ ನಗರದ ನಗರಪಾಲಿಕೆಯು ಮತದಾನ ನಡೆಸಿದ ಸುಮಾರು ಎರಡು ವಾರಗಳ ಬಳಿಕ ಕೆನಡದಲ್ಲಿ ಈ ಬೆಳವಣಿಗೆ ನಡೆದಿದೆ.
‘‘ಈ ನಿರ್ಣಯವು ವಿಭಜನೆಯಲ್ಲ. ಇದು ತೃಪ್ತಿದಾಯಕ ಮತ್ತು ಸಶಕ್ತ ಸಮಾಜಗಳನ್ನು ನಿರ್ಮಿಸುವ ಮತ್ತು ಅವುಗಳಿಗೆ ಸುರಕ್ಷಿತ ಶಾಲೆಗಳನ್ನು ಒದಗಿಸುವ ಕ್ರಮವಾಗಿದೆ’’ ಎಂದು ಯಾಲಿನಿ ‘ಗ್ಲೋಬ್ ಆ್ಯಂಡ್ ಮೇಲ್’ನೊಂದಿಗೆ ಮಾತನಾಡುತ್ತಾ ಹೇಳಿದರು.
‘‘ಸಿಯಾಟಲ್‌ನ 4 ಶೇಕಡ ಜನಸಂಖ್ಯೆ ದಕ್ಷಿಣ ಏಶ್ಯನ್ನರಾಗಿದ್ದಾರೆ. ಟೊರಾಂಟೊ ಜಿಲ್ಲಾ ಶಾಲಾ ಮಂಡಳಿಯಲ್ಲಿ 22 ಶೇಕಡ ದಕ್ಷಿಣ ಏಶ್ಯನ್ನರಿದ್ದೇವೆ’’ ಎಂದು ಅವರು ತಿಳಿಸಿದರು.
ತಮ್ಮ ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬುದಾಗಿ ದಲಿತ ಹೆತ್ತವರು ನನ್ನಲ್ಲಿ ಹೇಳಿಕೊಂಡಿದ್ದಾರೆ ಎಂದರು.
ಟೊರಾಂಟೊ ಜಿಲ್ಲಾ ಶಾಲಾ ಮಂಡಳಿಯು ಕೆನಡದ ಅತಿ ದೊಡ್ಡ ಶಾಲಾ ಮಂಡಳಿಯಾಗಿದೆ. ಅದು 583 ಶಾಲೆಗಳನ್ನು ಹೊಂದಿದ್ದು, ಸುಮಾರು 2,35,000 ವಿದ್ಯಾರ್ಥಿಗಳಿದ್ದಾರೆ.
ಐತಿಹಾಸಿಕ ಕ್ಷಣ: ಸೌತ್ ಏಶ್ಯನ್ ದಲಿತ್ ಆದಿವಾಸಿ ನೆಟ್‌ವರ್ಕ್
‘‘ಈ ರೀತಿಯ ಕಾರ್ಯಕ್ರಮವನ್ನು ಶಾಲಾ ಮಂಡಳಿಯೊಂದೇ ರೂಪಿಸಲು ಅಸಾಧ್ಯವಾದ ಕಾರಣ ಮೂಲ ನಿರ್ಣಯವನ್ನು ಕೊಂಚ ಬದಲಿಸಲಾಗಿದೆ. ನಮ್ಮಂದಿಗೆ ಓಂಟಾರಿಯೊ ಮಾನವಹಕ್ಕುಗಳ ಆಯೋಗವು ಕೆಲಸ ಮಾಡಲಿದೆ’’ ಎಂದು ಕಾರ್ಲ್‌ಟನ್ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಕೆನಡದಲ್ಲಿರುವ ಸೌತ್ ಏಶ್ಯನ್ ದಲಿತ್ ಆದಿವಾಸಿ ನೆಟ್‌ವರ್ಕ್‌ನ ಸಹ-ಸಂಸ್ಥಾಪಕ ಚಿನ್ನಯ್ಯ ಜಂಗಮ್ ಪತ್ರಿಕೆಯೊಂದಿಗೆ ಮಾತನಾಡುತ್ತಾ ಹೇಳಿದರು.
‘‘ಇದು ಐತಿಹಾಸಿಕ ಕ್ಷಣವಾಗಿದೆ. ಕೇವಲ ಶಾಲೆಗಳಲ್ಲಿ ಮಾತ್ರವಲ್ಲ, ಎಲ್ಲಾ ಕಡೆ ನಡೆಯುತ್ತಿರುವ ಜಾತಿ ದೌರ್ಜನ್ಯಗಳ ಬಗ್ಗೆ ಚರ್ಚೆ ನಡೆಸಲು ಮಂಡಳಿಯು ಬಾಗಿಲುಗಳನ್ನು ತೆರೆದಿದೆ’’ ಎಂದು ಅವರು ಹೇಳಿದರು.