ಜರ್ಮನ್ ಚರ್ಚ್‌ನಲ್ಲಿ ಗುಂಡಿನ ದಾಳಿ: ಹಲವು ಮಂದಿ ಬಲಿ

ಹ್ಯಾಂಬರ್ಗ್: ಇಲ್ಲಿನ ಜೆಹೋವಾಸ್ ವಿಟ್‌ನೆಸ್ ಸೆಂಟರ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ. ದಾಳಿಕೋರ ಕೂಡಾ ಮೃತಪಟ್ಟಿದ್ದಾನೆ ಎಂದು ಜರ್ಮನ್ ಪೊಲೀಸರು ಗುರುವಾರ ಪ್ರಕಟಿಸಿದ್ದಾರೆ. ಉತ್ತರ ಹ್ಯಾಂಬರ್ಗ್‌ನ ಕಟ್ಟಡದಲ್ಲಿ ಗುಂಡಿನ ದಾಳಿ ನಡೆದ ಬಗ್ಗೆ ರಾತ್ರಿ 8.15ಕ್ಕೆ ಮೊದಲ ತುರ್ತು ಕರೆ ಬಂದಿತ್ತು ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.
"ಹಲವು ಮಂದಿ ಗಾಯಗೊಂಡಿದ್ದು, ಕೆಲವರಿಗೆ ಮಾರಣಾಂತಿಕ ಗಾಯಗಳಾಗಿವೆ" ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ. "ಸದ್ಯಕ್ಕೆ ದಾಳಿಯ ಉದ್ದೇಶದ ಬಗ್ಗೆ ಯಾವುದೇ ವಿಶ್ವಾಸಾರ್ಹ ಮಾಹಿತಿ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಜನತೆ ಯಾವುದೇ ವದಂತಿಗಳಿಗೆ ಕಿವಿ ಕೊಡಬಾರದು ಎಂದು ಮನವಿ ಮಾಡಿದ್ದಾರೆ.
ಪೊಲೀಸರು ಕೆಟಸ್ಟೋಪ್ ವಾರ್ನಿಂಗ್ ಆ್ಯಪ್ ಮೂಲಕ ಭಾರಿ ಅಪಾಯದ ಎಚ್ಚರಿಕೆ ನೀಡಿದ್ದಾರೆ. ನಿವಾಸಿಗಳು ಮನೆಗಳಲ್ಲೇ ಉಳಿಯಬೇಕು ಹಾಗೂ ಆ ಪ್ರದೇಶದಲ್ಲಿ ಸಂಚರಿಸಬಾರದು ಎಂದು ಸಲಹೆ ಮಾಡಿದ್ದಾರೆ. ಆ ಬೀದಿಯ ಸುತ್ತಮುತ್ತಲ ಎಲ್ಲ ಕಟ್ಟಡಗಳಿಗೆ ಪೊಲೀಸ್ ಪಹರೆ ಹಾಕಲಾಗಿದೆ.
ನಿಖರವಾಗಿ ಸಾವಿನ ಸಂಖ್ಯೆಯನ್ನು ಪೊಲೀಸರು ಪ್ರಕಟಿಸಿಲ್ಲ. ಆದರೆ ಜರ್ಮನ್ ಮಾಧ್ಯಮಗಳ ಪ್ರಕಾರ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮೊದಲು ಭೇಟಿ ನೀಡಿದ ಪೊಲೀಸ್ ಅಧಿಕಾರಿಯ ಪ್ರಕಾರ, ಹಲವು ಜೀವರಹಿತ ದೇಹಗಳು ಮತ್ತು ಗಂಭೀರವಾಗಿ ಗಾಯಗೊಂಡ ಜನ ಪತ್ತೆಯಾಗಿದ್ದಾರೆ. ಕರೆ ಬಂದ ಕಟ್ಟಡದ ಮೇಲ್ಭಾಗದಲ್ಲೂ ಗುಂಡಿನ ದಾಳಿಯ ಸದ್ದು ಕೇಳಿಸಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ದಾಳಿಕೋರ ತಪ್ಪಿಸಿಕೊಂಡು ಹೋದ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದು ವಿವರಿಸಿದ್ದಾರೆ.