'ಮೀರಾಜ್-2023': ಅಂತರ್ ರಾಷ್ಟ್ರೀಯ ಮಟ್ಟದ ಕ್ಯಾಲಿಗ್ರಫಿ ಪ್ರದರ್ಶನಕ್ಕೆ ಚಾಲನೆ

ಬೆಂಗಳೂರು: ಬ್ಯಾರೀಸ್ ಗ್ರೂಪ್ ಪ್ರಾಯೋಜಕತ್ವದಲ್ಲಿ ಇನ್ಸ್ಟಿಟ್ಯೂಟ್ ಆಫ್ ಇಂಡೊ ಇಸ್ಲಾಮಿಕ್ ಆರ್ಟ್ ಅಂಡ್ ಕಲ್ಚರ್ ಸಂಘಟಿಸಿರುವ ಪ್ರಪ್ರಥಮ ಅಂತರ್ ರಾಷ್ಟ್ರೀಯ ಮಟ್ಟದ ಕ್ಯಾಲಿಗ್ರಫಿ ಪ್ರದರ್ಶನ 'ಮೀರಾಜ್-2023' ಅನ್ನು ಬೃಂಗ್ಟನ್ ರಸ್ತೆಯಲ್ಲಿರುವ ಪ್ರೆಸ್ಟಿಜ್ ಫಾಲ್ಕನ್ ಟವರ್ಸ್ ನ ದಿ ಫಾಲ್ಕನ್ ಡೆನ್ ಸಭಾಂಗಣದಲ್ಲಿ ಪ್ರೆಸ್ಟಿಜ್ ಗ್ರೂಪ್ ಅಧ್ಯಕ್ಷ ಇರ್ಫಾನ್ ರಝಾಕ್ ಉದ್ಘಾಟಿಸಿದರು.
ಬ್ಯಾರೀಸ್ ಗ್ರೂಪ್ ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಇನ್ಸ್ಟಿಟ್ಯೂಟ್ ಆಫ್ ಇಂಡೊ ಇಸ್ಲಾಮಿಕ್ ಆರ್ಟ್ ಅಂಡ್ ಕಲ್ಚರ್(ಐಐಐಎಸಿ)ನ ಪ್ರಾಂಶುಪಾಲ ಮುಖ್ತಾರ್ ಅಹ್ಮದ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಮಧ್ಯಾಹ್ನ 3.30 ಕ್ಕೆ ರಾಜ್ಯದ ಅಮೀರೆ ಶರೀಯತ್ ಹಾಗು ದಾರುಲ್ ಉಲೂಮ್ ಸಬೀಲುರ್ ರಷಾದ್ ನ ಪ್ರಾಂಶುಪಾಲರಾದ ಮೌಲಾನಾ ಮುಫ್ತಿ ಸಗೀರ್ ಅಹ್ಮದ್ ಸಾಹೇಬ್ ಅವರು ವಿಚಾರಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಇಂಡಿಯಾ ಬಿಲ್ಡರ್ಸ್ ಕಾರ್ಪೊರೇಷನ್ ಅಧ್ಯಕ್ಷ ಝಿಯಾವುಲ್ಲಾ ಶರೀಫ್ , ಪ್ರೆಸ್ಟೀಜ್ ಗ್ರೂಪ್ ನ ಅಧ್ಯಕ್ಷರು ಹಾಗು ಆಡಳಿತ ನಿರ್ದೇಶಕ ಇರ್ಫಾನ್ ರಝಾಕ್ , ಬೆಂಗಳೂರಿನಲ್ಲಿ ಟ್ಯುನೀಷಿಯಾ ಕಾನ್ಸುಲ್ ಶಬೀನಾ ಸುಲ್ತಾನಾ ಹಾಗು ಕಲಾವಿದೆ, ಲೇಖಕಿ ಪುಷ್ಪಮಾಲಾ ಎನ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸುತ್ತಾರೆ. ಬ್ಯಾರೀಸ್ ಗ್ರೂಪ್ ಹಾಗು ಐಐಐಎಸಿ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಟರ್ಕಿ, ಜಪಾನ್, ಸುಡಾನ್, ಮಧ್ಯಪ್ರಾಚ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳ ಕ್ಯಾಲಿಗ್ರಫಿ ತಜ್ಞರು ಮತ್ತು ಉರ್ದು, ಮಲಯಾಳಂ, ಕನ್ನಡ, ತಮಿಳು, ಮರಾಠಿ ಸೇರಿ ಹತ್ತಾರು ಭಾರತೀಯ ಭಾಷೆಗಳ ಕ್ಯಾಲಿಗ್ರಫಿ ತಜ್ಞರು ಭಾಗವಹಿಸಿ ವಿಷಯ ಮಂಡನೆ ಮಾಡಲಿದ್ದಾರೆ.
ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಕ್ಯಾಲಿಗ್ರಫಿ ಕಲೆಗಳ ಪ್ರದರ್ಶನ ಮತ್ತು ಕ್ಯಾಲಿಗ್ರಫಿಗೆ ಸಂಬಂಧಿಸಿದ ಹಲವು ವಿಷಯಗಳು ಹಾಗೂ ಆಯಾಮಗಳ ಬಗ್ಗೆ ವಿಚಾರಗೋಷ್ಠಿ, ಸಂವಾದ, ಕಾರ್ಯಾಗಾರ ಇತ್ಯಾದಿಗಳು ನಡೆಯಲಿವೆ. ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಅಪರೂಪದ ಕಾರ್ಯಕ್ರಮ ಇದಾಗಿದೆ.




















