ಮಹಿಳೆಯನ್ನು ನಿಂದಿಸಿದ ಸಂಸದ ಮುನಿಸ್ವಾಮಿ ಬಹಿರಂಗ ಕ್ಷಮೆಗೆ ಪತ್ರಕರ್ತೆಯರ ಸಂಘ ಆಗ್ರಹ

ಬೆಂಗಳೂರು, ಮಾ. 10: ಕೋಲಾರ ಸಂಸದ ಮುನಿಸ್ವಾಮಿ ಒಬ್ಬ ಜನಪ್ರತಿನಿಧಿಯಾಗಿ ಮಹಿಳೆಯರ ಕುರಿತು ಮಾತನಾಡಿರುವ ರೀತಿ ಮಹಿಳೆಯರ ಘನತೆಗೆ ಕುಂದು ತರುವಂತಹದ್ದು. ಬೆದರಿಕೆ, ಬಲವಂತದ ಧಾಟಿಯಲ್ಲಿ ಮಾತನಾಡಿರುವ ಸಂಸದರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ‘ಕರ್ನಾಟಕ ಪತ್ರಕರ್ತೆಯರ ಸಂಘ’, ಸಂಸದ ಮುನಿಸ್ವಾಮಿ ತಮ್ಮ ಹೇಳಿಕೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.
ಶುಕ್ರವಾರ ಈ ಸಂಬಂಧ ಪ್ರಕಟನೆ ನೀಡಿರುವ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಎಂ.ಕಡಕೋಳ, ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಕೋಲಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳೆಯನ್ನು ‘ನೀವು ಕುಂಕುಮ ಏಕೆ ಇಟ್ಟುಕೊಂಡಿಲ್ಲ’ ಎಂದು ಮುನಿಸ್ವಾಮಿ ಟೀಕಿಸಿ ಮಾತನಾಡಿರುವುದು ಸಲ್ಲ. ಮಹಿಳೆ ಕುಂಕುಮ ಇಡಬೇಕೇ, ಬೇಡವೇ, ಎಂತಹ ಉಡುಪು ಧರಿಸಬೇಕು, ಏನನ್ನು ಸೇವಿಸಬೇಕು ಇತ್ಯಾದಿಗಳನ್ನು ಬಲವಂತವಾಗಿ ಹೇರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹದ್ದು’ ಎಂದು ತಿಳಿಸಿದ್ದಾರೆ.
Next Story