ರೈತರ ಆಶೋತ್ತರಗಳನ್ನು ಈಡೇರಿಸಿದ ಸಮಾಧಾನವಿದೆ: ಸಿಎಂ ಬೊಮ್ಮಾಯಿ

ಹಾವೇರಿ, ಮಾ. 10: ‘ಜಿಲ್ಲೆಯಲ್ಲಿ ಮೆಗಾಡೈರಿ ಘಟಕ ಉದ್ಘಾಟನೆ ಮಾಡುವ ಮೂಲಕ ಹಾಲು ಉತ್ಪಾದಕ ರೈತರ ಆಶೋತ್ತರಗಳನ್ನು ಈಡೇರಿಸಿದ ಸಮಾಧಾನವಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾವು ಯಾವುದಕ್ಕೆ ಹೋರಾಟ ಮಾಡಿದ್ದೇವೋ ಆ ಕಾರಣವನ್ನು ಸಾಕಾರಗೊಳಿಸುವ ಸೌಭಾಗ್ಯ ನಮಗೆ ದೊರೆತಿರುವುದು ಖುಷಿ ತಂದಿದೆ. ಜಿಲ್ಲೆಯ ಬಹುದಿನಗಳ ಬೇಡಿಕೆ ಈಡೇರಿರುವುದು ಸಂತೋಷ. ಹಿಂದಿನ ಸರಕಾರಗಳಲ್ಲಿ ಈಡೇರಿರದ ಸಂಗತಿ ನನಗೆ ಅವಕಾಶ ಸಿಕ್ಕ ಸಂದರ್ಭದಲ್ಲಿ ಇದನ್ನು ಮಾಡಲೇಬೇಕೆಂದು ತೀರ್ಮಾನಿಸಿ ಮೆಗಾಡೈರಿ ಪ್ರಾರಂಭಿಸಲಾಗಿದೆ ಎಂದರು.
ಹಾಲು ಉತ್ಪಾದನೆ ಸುಮಾರು ಒಂದು ಲಕ್ಷ ಲೀಟರ್ ಗೂ ಮೀರಿ ಆಗುತ್ತಿದೆ. ಡೈರಿ ಮಾಡುವ ಮೊದಲು 75 ಲಕ್ಷ ಲೀ. ಇತ್ತು. ಘಟಕ ಸಂಪೂರ್ಣವಾಗಿ ಕಾರ್ಯಗತವಾದರೆ ನಮ್ಮದೇ ಪ್ಯಾಕೇಜಿಂಗ್ ಹಾಗೂ ಮಾರ್ಕೆಟಿಂಗ್ ಮಾಡಿದಾಗ ಇನ್ನೂ ಹೆಚ್ಚಿನ ಹಾಲು ಕೊಳ್ಳಬಹುದು ಮತ್ತು ರೈತರಿಗೆ ಹೆಚ್ಚಿನ ಸೌಲಭ್ಯ ಗಳನ್ನು ನೀಡಬಹುದು ಎಂದರು.
ಜಿಲ್ಲೆಯ ರೈತರ ಕನಸು ನನಸಾಗಿದೆ. ಹಾಲು ಒಕ್ಕೂಟ, ಮೆಗಾ ಡೈರಿ ಸ್ಥಾಪಿಸಲಾಗುತ್ತಿದೆ. ಈ ಮುಂಚೆ ಟೆಟ್ರಾಪ್ಯಾಕ್ ಯುಎಚ್‍ಟಿ ಹಾಲು ಸ್ಥಾವರ ಹಾಗೂ ಹಾಲು ಸ್ಯಾಚೆಟ್ ಪ್ಯಾಕಿಂಗ್ ಘಟಕಕ್ಕೂ ಅಡಿಗಲ್ಲು ಹಾಕಿದ್ದು, ಇಂದು ಉದ್ಘಾಟಿಸಲಾಗಿದೆ. ಟೆಟ್ರಾ ಪ್ಯಾಕ್‍ನ ಯುಎಚ್‍ಟಿ ಹಾಲು ಸ್ಥಾವರದಲ್ಲಿ ಸುಮಾರು 80 ಸಾವಿರದಿಂದ 1 ಲಕ್ಷದ ವರೆಗೂ ಸಾಮರ್ಥ್ಯವಿದೆ. ಸ್ಯಾಚೆಟ್ ಹಾಲು ಘಟಕದ ಸಾಮರ್ಥ್ಯ 25ರಿಂದ 50 ಸಾವಿರ ಲೀ.ವರೆಗೆ ಇದೆ ಎಂದು ಹೇಳಿದರು.