ಹಾವೇರಿ | ಲಂಚ ಕೇಳಿದ ಅಧಿಕಾರಿಗೆ ಎತ್ತು ಕೊಡಲು ಮುಂದಾದ ರೈತ: ವಿಡಿಯೋ ವೈರಲ್

ಬೆಂಗಳೂರು, ಮಾ. 10: ಖಾತೆ ಬದಲಾವಣೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಸರಕಾರಿ ಅಧಿಕಾರಿಗೆ ‘ತನ್ನ ಬಳಿ ಹಣವಿಲ್ಲ, ನನ್ನ ಎತ್ತು(ಜಾನುವಾರು), ಚಕ್ಕಡಿ ಗಾಡಿ ತೆಗೆದುಕೊಳ್ಳಿ’ ಎಂದು ಹೇಳುವ ಮೂಲಕ ರೈತನೊಬ್ಬ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಿಎಂ ತವರು ಜಿಲ್ಲೆ ಹಾವೇರಿಯ ಸವಣೂರು ಪುರಸಭೆಯಲ್ಲಿ ನಡೆದಿದೆ.
ಹಾವೇರಿ ಸವಣೂರಿನ ರೈತ ಯಲ್ಲಪ್ಪ ರಾಣೋಜಿ ‘ಮನೆಯ ಖಾತೆ ಬದಲಾವಣೆಗೆ 2 ವರ್ಷಗಳಿಂದ ಪುರಸಭೆ ಕಚೇರಿಗೆ ಅಲೆಯುತ್ತಿದ್ದಾರೆ. ಆದರೆ, ಅಧಿಕಾರಿ ಮತ್ತು ಸಿಬ್ಬಂದಿ ಇಂದು, ನಾಳೆ ಎಂದು ವಿಳಂಬ ಮಾಡುತ್ತಿದ್ದು, ಎರಡು ವರ್ಷಗಳಿಂದ ಅಲೆಸುತ್ತಿದ್ದಾರೆಂದು ಆರೋಪಿಸಲಾಗಿದೆ. ಈ ಮಧ್ಯೆ ಅಧಿಕಾರಿಯೊಬ್ಬ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ‘ತನ್ನ ಬಳಿ ಹಣವಿಲ್ಲ, ಅದರ ಬದಲಿಗೆ ಒಂದು ಎತ್ತನ್ನು ನಿಮ್ಮ ಬಳಿ ಕಟ್ಟಿಕೊಂಡು ನನಗೆ ಖಾತೆ ಬದಲಾವಣೆ ಮಾಡಿಕೊಡಿ’ ಎಂದು ಯಲ್ಲಪ್ಪ ಕೋರಿದ್ದಾರೆ.
ಯಲ್ಲಪ್ಪ ಪುರಸಭೆ ಕಚೇರಿಗೆ ಎತ್ತು, ಚಕ್ಕಡಿ ಗಾಡಿಯೊಂದಿಗೆ ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಪುರಸಭೆ ಅಧಿಕಾರಿಗಳು, ರೈತನ ಸಂಕಷ್ಟ ಆಲಿಸಿದ್ದು, ಖಾತೆ ಬದಲಾವಣೆಗೆ ಮಾಡಿಕೊಡಲು ಕಡತವನ್ನು ಹುಡುಕಾಟ ನಡೆಸಿದ್ದಾರೆ. ಆದರೆ, ಸಿಬ್ಬಂದಿ ಕಡತವನ್ನೇ ಕಣ್ಮರೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ರೈತ ಯಲ್ಲಪ್ಪ, ಖಾತೆ ಬದಲಾವಣೆ ಮಾಡಿಕೊಳ್ಳಲು ಎರಡು ವರ್ಷಗಳಿಂದ ನನ್ನ ಕೃಷಿ ಚಟುವಟಿಕೆಗಳ ಮಧ್ಯೆ ಪುರಸಭೆ ಕಚೇರಿಗೆ ಅಲೆಯುತ್ತಿದ್ದು, ಎರಡು-ಮೂರು ಜೊತೆ ಚಪ್ಪಲಿ ಸವೆಸಿದ್ದೇನೆ. ಆದರೂ, ಅಧಿಕಾರಿಗಳು ನನಗೆ ಖಾತೆ ಬದಲಾವಣೆ ಮಾಡಿಕೊಟ್ಟಿಲ್ಲ. ನಾನು ಎತ್ತುಗಳೊಂದಿಗೆ ಬಂದ ಬಳಿಕ ಖಾತೆ ಬದಲಾವಣೆ ಮಾಡಿಕೊಡುವ ಭರವಸೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಈ ವಿಡಿಯೋವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ''ಮುಖ್ಯಮಂತ್ರಿಯವರ ತವರು ಜಿಲ್ಲೆಯ್ಲಲೇ ಇಂಥ ಘಟನೆ ನಡೆಯುತ್ತಿರುವುದು ನಾಚಿಕೇಡಿನ ಸಂಗತಿ.
ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಉತ್ತಮ'' ಎಂದು ಬರೆದುಕೊಂಡಿದ್ದಾರೆ.
CATTLE as “40% Bribe” from Farmers!
— Randeep Singh Surjewala (@rssurjewala) March 10, 2023
A “New Low” in BJP’s “bribery story”.
The fact that this is happening in CM Bommai’s District tells us how deep rooted is the insatiable lust of “BHRASHTASUR BOMMAI GOVT” !
SHAME ON U MR. BOMMAI !
BETTER QUIT & Go HOME !#40PercentSarkara https://t.co/GoB8gVMvuM