40 ಪರ್ಸೆಂಟ್ ಕಮಿಷನ್ ಬಿಜೆಪಿಯನ್ನು 40 ಸ್ಥಾನಗಳಿಗೆ ಸೀಮಿತಗೊಳಿಸುವುದು ಕಾಂಗ್ರೆಸ್ ಗುರಿ: ಬಿ.ಕೆ.ಹರಿಪ್ರಸಾದ್
ಬೆಂಗಳೂರು, ಮಾ. 10: ‘ನಲವತ್ತು ಪರ್ಸೆಂಟ್ ಕಮಿಷನ್ ಸರಕಾರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೇವಲ 40 ಸ್ಥಾನಗಳಿಗೆ ನಿಲ್ಲಿಸುವುದು ಕಾಂಗ್ರೆಸ್ ಗುರಿಯಾಗಿದೆ’ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ನಿಯಂತ್ರಿಸಲು ಸೂಕ್ತ ಕಾರ್ಯತಂತ್ರ ರೂಪಿಸಲಾಗಿದೆ. ಬಿಜೆಪಿಯವರಿಗೆ 60 ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳು ಬರುವುದಿಲ್ಲ ಎಂದು ಗೊತ್ತಾಗಿದೆ. ಹೀಗಾಗಿಯೇ ಬಿಜೆಪಿಯ ಹಲವು ನಾಯಕರು ಪಕ್ಷ ತ್ಯಜಿಸಿ ಕಾಂಗ್ರೆಸ್‍ನತ್ತ ಬರುತ್ತಿದ್ದಾರೆ ಎಂದು ತಿಳಿಸಿದರು.
ಬಿಎಸ್‍ವೈ ಸೇರಿದಂತೆ ಲಿಂಗಾಯತ ಸಮುದಾಯದ ಮುಖಂಡರು ಬಿಜೆಪಿ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಇದೀಗ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿದೆ. ವಿ.ಸೋಮಣ್ಣ ಅವರಿಗೆ ಜೊತೆಗೆ ಬೇರೆ ಸಮುದಾಯಗಳ ಜೊತೆಗೆ ಒಳ್ಳೆಯ ಸಂಬಂಧ ಇದೆ. ಇಂತಹವರು ಪಕ್ಷದಿಂದ ಬೇಸತ್ತಿರುವುದು ಸತ್ಯ ಎಂದು ಅವರು ಉಲ್ಲೇಖಿಸಿದರು.
ಟಿಕೆಟ್ ಹಂಚಿಕೆ ವಿಚಾರ ಪಕ್ಷಕ್ಕೆ ಯಾವುದೇ ಸವಾಲು ಇಲ್ಲ. ಮೂರು ದಿನಗಳ ಕಾಲ ಪರಿಶೀಲನಾ ಸಮಿತಿ ಸಭೆ ಮಾಡಿ ಚರ್ಚಿಸಿದ್ದು, ಸಂಪೂರ್ಣ ಮಾಹಿತಿಯನ್ನು ಸಮಿತಿಗೆ ನೀಡಿದ್ದೇವೆ. ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಪಟ್ಟಿ ಅಂತಿಮವಾಗಲಿದೆ. ಟಿಕೆಟ್ ಹಂಚಿಕೆ ಸಂಬಂಧ ಯಾವುದೇ ಕಗ್ಗಂಟು ಇಲ್ಲ ಎಂದು ಅವರು ತಿಳಿಸಿದರು.