ಕ್ಯಾಲಿಗ್ರಫಿ ಮೂಲಕ ದ್ವೇಷದ ವಾತಾವರಣ ನಿರ್ಮೂಲನೆ ಮಾಡೋಣ: ಸೈಯದ್ ಬ್ಯಾರಿ
►ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ಯಾಲಿಗ್ರಫಿ ಪ್ರದರ್ಶನ, ವಿಚಾರಗೋಷ್ಠಿಗೆ ಚಾಲನೆ
ಬೆಂಗಳೂರು: ವಿಶ್ವದಲ್ಲಿ ಎಲ್ಲಿ ನೋಡಿದರೂ ಇವತ್ತು ದ್ವೇಷದ ವಾತಾವರಣ ನಿರ್ಮಾಣವಾಗುತ್ತಿದೆ. ಮನಸ್ಸುಗಳ ನಡುವೆ ಸೃಷ್ಟಿಯಾಗಿರುವ ಕಂದಕಗಳನ್ನು ಕಣ್ಮನ ತಣಿಸುವ ಕ್ಯಾಲಿಗ್ರಫಿ ಕಲೆಯ ಮೂಲಕ ಮುಚ್ಚುವ ಕೆಲಸ ಮಾಡೋಣ ಎಂದು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಕರೆ ನೀಡಿದರು.
ಶುಕ್ರವಾರ ನಗರದ ಬೃಂಟನ್ ರಸ್ತೆಯಲ್ಲಿರುವ ಪ್ರೆಸ್ಟಿಜ್ ಫಾಲ್ಕನ್ ಟವರ್ಸ್ ನ ದಿ ಫಾಲ್ಕನ್ ಡೆನ್ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಬ್ಯಾರೀಸ್ ಗ್ರೂಪ್ ಪ್ರಾಯೋಜಕತ್ವದ, ಇನ್ಸ್ ಟಿಟ್ಯೂಟ್ ಆಫ್ ಇಂಡೋ ಇಸ್ಲಾಮಿಕ್ ಆರ್ಟ್ ಎಂಡ್ ಕಲ್ಚರ್ ಆಯೋಜಿಸಿರುವ ‘ಮೀರಾಜ್ 2023-ಮೂರು ದಿನಗಳ ಅಂತಾರಾಷ್ಟ್ರೀಯ ಕ್ಯಾಲಿಗ್ರಫಿ ಪ್ರದರ್ಶನ, ವಿಚಾರಗೋಷ್ಠಿ’ಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದರು.
ಇವತ್ತು ಮಾನವೀಯತೆ ಹಿಂದುಳಿಯುತ್ತಿದೆ. ನಾವು ಶಾಂತಿಯ ವಾತಾವರಣ ನಿರ್ಮಿಸಲು ಕಲೆಯನ್ನು ಮಾಧ್ಯಮವನ್ನಾಗಿ ಮಾಡಿಕೊಳ್ಳಬೇಕಿದೆ. ಸಾಮಾನ್ಯ ಜನರಲ್ಲಿ ಕ್ಯಾಲಿಗ್ರಫಿಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ಈ ಕಲೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವ ಸಂಕಲ್ಪ ಮಾಡೋಣ ಎಂದು ಸೈಯದ್ ಮುಹಮ್ಮದ್ ಬ್ಯಾರಿ ಕರೆ ನೀಡಿದರು.
‘ಮಿರಾಜ್ 2023’ ಕಾರ್ಯಕ್ರಮವು ಕ್ಯಾಲಿಗ್ರಫಿಗೆ ಹೊಸ ರೂಪವನ್ನು ನೀಡಿದೆ. ಸಾಮಾನ್ಯವಾಗಿ ಜನರಲ್ಲಿ ಕ್ಯಾಲಿಗ್ರಫಿ ಎಂದರೆ ಅರೆಬಿಕ್, ಪರ್ಷಿಯನ್, ಚೈನೀಸ್, ಜಪಾನೀಸ್ ಭಾಷೆಗೆ ಸಂಬಂಧಪಟ್ಟಿದ್ದು ಎಂದು ಭಾವಿಸುತ್ತಾರೆ. ನಾವು ಈ ಕಲೆಯ ಬಗ್ಗೆ ಅಧ್ಯಯನ ನಡೆಸಿದಾಗ ನಮ್ಮ ದೇಶದ ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ, ದೇವನಾಗರಿ ಸೇರಿದಂತೆ ಬಹುತೇಕ ಎಲ್ಲ ಭಾಷೆಗಳೂ ಕ್ಯಾಲಿಗ್ರಫಿಯ ಪ್ರಭಾವವನ್ನು ಹೊಂದಿರುವುದು ಕಂಡು ಬಂತು ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ನಾವು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಬಹುಭಾಷಾ ಕ್ಯಾಲಿಗ್ರಫಿ ಪ್ರದರ್ಶನ ಹಾಗೂ ವಿಚಾರಗೋಷ್ಠಿಗಳನ್ನು ಒಳಗೊಂಡ ಈ ಮೂರು ದಿನಗಳ ಅಂತರಾಷ್ಟೀಯ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಕ್ಯಾಲಿಗ್ರಫಿ ಕೇವಲ ಒಂದು ಕಲೆ ಅಲ್ಲ, ಮಾನವನ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರುವಂತಹ ಭಾವನಾತ್ಮಕ, ಆಧ್ಯಾತ್ಮಿಕತೆಯನ್ನು ಹೊಂದಿರುವ ಮಾರ್ಗ ಎಂದು ಭಾವಿಸಿದ್ದೇನೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ತಿಳಿಸಿದರು.
ಇಂಡಿಯಾ ಬಿಲ್ಡರ್ಸ್ ಕಾರ್ಪೋರೇಷನ್ ಅಧ್ಯಕ್ಷ ಝಿಯಾವುಲ್ಲಾ ಶರೀಫ್, ಬೆಂಗಳೂರಿನಲ್ಲಿ ಟ್ಯುನೀಶಿಯಾ ದೇಶದ ಕಾನ್ಸುಲ್ ಶಬಿನಾ ಸುಲ್ತಾನಾ, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಕ್ಯಾಲಿಗ್ರಫಿ ಗುರು ಫ್ರೊ.ಕೆ.ಸಿ.ಜನಾರ್ದನ್ , ಕಲಾವಿದೆ ಎನ್.ಪುಷ್ಪಾಮಾಲಾ ಮತ್ತಿತರ ಗಣ್ಯರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಮೀರೆ ಶರೀಅತ್ ಕರ್ನಾಟಕ ಮೌಲಾನ ಮುಫ್ತಿ ಸಗೀರ್ ಅಹ್ಮದ್ ರಶಾದಿ ದುಆ ಮಾಡಿ, ಶುಭ ಕೋರಿದರು. ಐಐಐಎಸಿ ಪ್ರಾಂಶುಪಾಲ ಮುಖ್ತಾರ್ ಅಹ್ಮದ್ ವಂದಿಸಿದರು. ಕೋಡಿ ಕುಂದಾಪುರದ ಬ್ಯಾರೀಸ್ ಸೀಸೈಡ್ ಶಾಲೆಯ ಶಹೀನಾ ಮತ್ತು ತಂಡವು ಪ್ರಾರ್ಥನೆ ಸಲ್ಲಿಸಿತು. ಮುಹಮ್ಮದ್ ಫೈಸಲ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಟರ್ಕಿ, ಜಪಾನ್, ಸುಡಾನ್, ಮಧ್ಯಪ್ರಾಚ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳ ಕ್ಯಾಲಿಗ್ರಫಿ ತಜ್ಞರು ಮತ್ತು ಉರ್ದು, ಮಲಯಾಳಂ, ಕನ್ನಡ, ತಮಿಳು, ಮರಾಠಿ ಸೇರಿ ಹತ್ತಾರು ಭಾರತೀಯ ಭಾಷೆಗಳ ಕ್ಯಾಲಿಗ್ರಫಿ ತಜ್ಞರು ಭಾಗವಹಿಸಿ ವಿಷಯ ಮಂಡನೆ ಮಾಡಲಿದ್ದಾರೆ.
ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಕ್ಯಾಲಿಗ್ರಫಿ ಕಲೆಗಳ ಪ್ರದರ್ಶನ ಮತ್ತು ಕ್ಯಾಲಿಗ್ರಫಿಗೆ ಸಂಬಂಧಿಸಿದ ಹಲವು ವಿಷಯಗಳು ಹಾಗೂ ಆಯಾಮಗಳ ಬಗ್ಗೆ ವಿಚಾರಗೋಷ್ಠಿ, ಸಂವಾದ, ಕಾರ್ಯಾಗಾರ ಇತ್ಯಾದಿಗಳು ನಡೆಯಲಿವೆ. ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಅಪರೂಪದ ಕಾರ್ಯಕ್ರಮ ಇದಾಗಿದೆ.