ಸೈಯದ್ ಬ್ಯಾರಿ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಮಾಡಿದ್ದಾರೆ: ಶಬಿನಾ ಸುಲ್ತಾನ
►ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ಯಾಲಿಗ್ರಫಿ ಪ್ರದರ್ಶನ, ವಿಚಾರಗೋಷ್ಠಿಗೆ ಚಾಲನೆ

ಬೆಂಗಳೂರು: ಸಮಾಜದಲ್ಲಿ ಇವತ್ತು ನಮ್ಮ ಸುತ್ತಮುತ್ತಲು ದ್ವೇಷ, ಅಸಹಿಷ್ಣುತೆ, ತಾರತಮ್ಯವನ್ನು ನೋಡುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ಸೈಯದ್ ಮುಹಮ್ಮದ್ ಬ್ಯಾರಿ ಒಡೆದು ಹೋಗುತ್ತಿರುವ ಮನಸ್ಸುಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಟ್ಯುನೀಶಿಯಾ ದೇಶದ ಕಾನ್ಸುಲ್ ಶಬಿನಾ ಸುಲ್ತಾನಾ ಮೆಚ್ಚುಗೆ ವ್ಯಕ್ತಪಡಿಸಿದರು.
ಶುಕ್ರವಾರ ನಗರದ ಬೃಂಟನ್ ರಸ್ತೆಯಲ್ಲಿರುವ ಪ್ರೆಸ್ಟಿಜ್ ಫಾಲ್ಕನ್ ಟವರ್ಸ್ ನ ದಿ ಫಾಲ್ಕನ್ ಡೆನ್ ಸಭಾಂಗಣದಲ್ಲಿ ಆಯೋಜಿಸಲಾಗಿರುವ ‘ಮೀರಾಜ್ 2023-ಮೂರು ದಿನಗಳ ಅಂತಾರಾಷ್ಟ್ರೀಯ ಕ್ಯಾಲಿಗ್ರಫಿ ಪ್ರದರ್ಶನ, ವಿಚಾರಗೋಷ್ಠಿ’ಯ ಉದ್ಘಾಟನಾ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಅವರು ಮಾತನಾಡಿದರು.
ಕಲೆ ಹಾಗೂ ಸಂಸ್ಕೃತಿ ಯಾರನ್ನು ಬೇರ್ಪಡಿಸುವುದಿಲ್ಲ. ಅದು ಎಲ್ಲರನ್ನೂ ಒಳಗೊಳ್ಳುತ್ತದೆ. ಕ್ಯಾಲಿಗ್ರಫಿ ಕಲೆಗೆ ಮತ್ತಷ್ಟು ಜನಪ್ರಿಯತೆ ತಂದು ಕೊಡಬೇಕು. ಮುಂದಿನ ದಿನಗಳಲ್ಲಿ ಟ್ಯುನೀಶಿಯಾ ದೇಶದಿಂದಲೂ ಹಲವಾರು ಕಲಾವಿದರನ್ನು ಇಲ್ಲಿಗೆ ಕರೆತರಲು ಉತ್ಸುಕರಾಗಿದ್ದೇವೆ ಎಂದು ಶಬಿನಾ ಸುಲ್ತಾನಾ ಹೇಳಿದರು.
ವಿವಿಧತೆಯಲ್ಲಿ ಏಕತೆಯನ್ನು ಪ್ರದರ್ಶಿಸುವ ಕಾರ್ಯಕ್ರಮ ಇದಾಗಿದೆ. ಕಲೆ ಹಾಗೂ ಸಂಸ್ಕೃತಿ ಜನರನ್ನು ಪ್ರೋತ್ಸಾಹಿಸುತ್ತದೆ. ಕಲೆ ಗಡಿಗಳನ್ನು ದಾಟಿ ತನ್ನ ಅಭಿವ್ಯಕ್ತಿಯನ್ನು ಪ್ರದರ್ಶಿಸುವ ಸಾಧನವಾಗಿದೆ. ಈ ಕಾರ್ಯಕ್ರಮದಲ್ಲಿ ಸಿಗುವಂತಹ ಶಾಂತಿ, ಪ್ರೀತಿ, ಆಧ್ಯಾತ್ಮಿಕತೆಯ ಸಂದೇಶವನ್ನು ಕಲಾವಿದರು ಜಗತ್ತಿಗೆ ಹಂಚಬೇಕು ಎಂದು ಅವರು ತಿಳಿಸಿದರು.
ವಿಶ್ವಸಂಸ್ಥೆಯ ಯುನೆಸ್ಕೊ ಇಂತಹ ಕಲೆ, ಸಂಸ್ಕೃತಿ, ಪರಂಪರೆಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಅಂತರ್‍ರಾಷ್ಟ್ರೀಯ ಮಟ್ಟದ ಇಂತಹ ಕಾರ್ಯಕ್ರಮಗಳ ಆಯೋಜನೆಗೆ ಯುನೆಸ್ಕೊ ನೆರವು ಪಡೆಯಲು ಪ್ರಯತ್ನಿಸೋಣ ಎಂದು ಶಬಿನಾ ಸುಲ್ತಾನಾ ಹೇಳಿದರು.
ಮೀರಾಜ್-2023ರಲ್ಲಿ ಭಾಗವಹಿಸಿರುವ ಕ್ಯಾಲಿಗ್ರಫಿ ಕಲಾವಿದರ ವಿವರಗಳನ್ನು ಒಳಗೊಂಡ ಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಇಂಡಿಯಾ ಬಿಲ್ಡರ್ಸ್ ಕಾರ್ಪೋರೇಷನ್ ಅಧ್ಯಕ್ಷ ಝಿಯಾವುಲ್ಲಾ ಶರೀಫ್, ಕಳೆದ 40 ವರ್ಷಗಳಿಂದ ನಾನು ಸೈಯದ್ ಬ್ಯಾರಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಮಾಜಮುಖಿ ಹಾಗು ರಚನಾತ್ಮಕ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ ಎಂದರು.
ನಾವಿಬ್ಬರೂ ಕಟ್ಟಡ ನಿರ್ಮಾಣ ಕ್ಷೇತ್ರವನ್ನು ಪ್ರತಿನಿಧಿಸುತ್ತೇವೆ. ಇಂತಹ ಅಮೂಲ್ಯ ಕಲೆಯ ಬಗ್ಗೆ ಅವರಿಗೆ ಇರುವ ಆಸಕ್ತಿ ನಿಜಕ್ಕೂ ಮೆಚ್ಚುವಂತದ್ದು. ಇವತ್ತು ಅಂತರ್‍ರಾಷ್ಟ್ರೀಯ ಕಲಾವಿದರನ್ನು ಆಹ್ವಾನಿಸಿ, ಅವರಲ್ಲಿನ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಸಯ್ಯದ್ ಬ್ಯಾರಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಐಐಐಎಸಿಯ ಬ್ರೋಶರ್ ಬಿಡುಗಡೆ ಮಾಡಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ತಂತ್ರಜ್ಞಾನ ಬೆಳೆದಂತೆ ಕಲೆಯ ಸ್ವರೂಪವು ಬದಲಾಗುತ್ತಿದೆ. ಆದರೆ, ಕ್ಯಾಲಿಗ್ರಫಿ ಕಲೆಯು ಶತಮಾನಗಳಿಂದಲೂ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಚೀನಾದಿಂದ ಕ್ಯಾಲಿಗ್ರಫಿ ಕಲೆ ಆರಂಭವಾಯಿತು ಎಂದು ಹೇಳಲಾಗುತ್ತದೆ. ಆದರೆ, ಇವತ್ತು ಆ ಕಲೆ ಸರ್ವವ್ಯಾಪಿಯಾಗಿದೆ ಎಂದರು.
ಭಾರತದಲ್ಲಿ ತಾಳೆಗರಿಗಳ ಮೇಲೆ ಬರೆಯುತ್ತಿದ್ದದ್ದು ಕ್ಯಾಲಿಗ್ರಫಿ ಆಗಿದೆ. ಎಲ್ಲ ಧರ್ಮಗಳ ಪವಿತ್ರ ಗ್ರಂಥಗಳು ಕ್ಯಾಲಿಗ್ರಫಿ ಮೂಲಕವೇ ರಚನೆಯಾಗಿವೆ. ಇದರಿಂದಾಗಿ, ಕ್ಯಾಲಿಗ್ರಫಿ ಜೊತೆ ಪ್ರತಿಯೊಬ್ಬರು ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಇಂತಹ ಕಲೆಗೆ ಸೈಯದ್ ಬ್ಯಾರಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಚಿರಂಜೀವಿ ಸಿಂಗ್ ಹೇಳಿದರು.
ಕ್ಯಾಲಿಗ್ರಫಿ ಗುರು ಪ್ರೊ.ಕೆ.ಸಿ.ಜನಾರ್ದನ್ ಮಾತನಾಡಿ, ಆಧುನಿಕ ತಂತ್ರಜ್ಞಾನವು ಶಾಸ್ತ್ರೀಯ ಕಲೆಗಳ ಮೇಲೆ ಯಾವ ರೀತಿ ಪ್ರಭಾವ ಬೀರಿ, ಅವುಗಳನ್ನು ಇಂದಿನ ತಲೆಮಾರಿನಿಂದ ದೂರ ತಳ್ಳಿದೆ ಎಂಬುದನ್ನು ವಿವರಿಸಿದರು. ಕ್ಯಾಲಿಗ್ರಫಿಯನ್ನು ಮತ್ತಷ್ಟು ಪ್ರೋತ್ಸಾಹ ನೀಡಿ, ಯುವ ಸಮೂಹಕ್ಕೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಕಲಾವಿದೆ ಎನ್.ಪುಷ್ಪಾಮಾಲಾ ಮಾತನಾಡಿ, ಜಗತ್ತಿನ ವಿವಿಧ ಭಾಷೆಗಳ ಲಿಪಿಗಳ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು.
ಕಾರ್ಯಕ್ರಮದಲ್ಲಿ ಅಮೀರೆ ಶರೀಅತ್ ಕರ್ನಾಟಕ ಮೌಲಾನ ಮುಫ್ತಿ ಸಗೀರ್ ಅಹ್ಮದ್ ರಶಾದಿ ದುಆ ಮಾಡಿ, ಶುಭ ಕೋರಿದರು. ಐಐಐಎಸಿ ಪ್ರಾಂಶುಪಾಲ ಮುಖ್ತಾರ್ ಅಹ್ಮದ್ ವಂದಿಸಿದರು. ಕೋಡಿ ಕುಂದಾಪುರದ ಬ್ಯಾರೀಸ್ ಸೀಸೈಡ್ ಶಾಲೆಯ ಶಹೀನಾ ಮತ್ತು ತಂಡವು ಪ್ರಾರ್ಥನೆ ಸಲ್ಲಿಸಿತು. ಮುಹಮ್ಮದ್ ಫೈಸಲ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಟರ್ಕಿ, ಜಪಾನ್, ಸುಡಾನ್, ಮಧ್ಯಪ್ರಾಚ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳ ಕ್ಯಾಲಿಗ್ರಫಿ ತಜ್ಞರು ಮತ್ತು ಉರ್ದು, ಮಲಯಾಳಂ, ಕನ್ನಡ, ತಮಿಳು, ಮರಾಠಿ ಸೇರಿ ಹತ್ತಾರು ಭಾರತೀಯ ಭಾಷೆಗಳ ಕ್ಯಾಲಿಗ್ರಫಿ ತಜ್ಞರು ಭಾಗವಹಿಸಿ ವಿಷಯ ಮಂಡನೆ ಮಾಡಲಿದ್ದಾರೆ.
ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಕ್ಯಾಲಿಗ್ರಫಿ ಕಲೆಗಳ ಪ್ರದರ್ಶನ ಮತ್ತು ಕ್ಯಾಲಿಗ್ರಫಿಗೆ ಸಂಬಂಧಿಸಿದ ಹಲವು ವಿಷಯಗಳು ಹಾಗೂ ಆಯಾಮಗಳ ಬಗ್ಗೆ ವಿಚಾರಗೋಷ್ಠಿ, ಸಂವಾದ, ಕಾರ್ಯಾಗಾರ ಇತ್ಯಾದಿಗಳು ನಡೆಯಲಿವೆ. ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಅಪರೂಪದ ಕಾರ್ಯಕ್ರಮ ಇದಾಗಿದೆ.







