ಉಝ್ಬೆಕಿಸ್ತಾನದಲ್ಲಿ ಸಾವುಗಳು: ದಿಲ್ಲಿಯ ಪೂರೈಕೆ ಸಂಸ್ಥೆ ವಿರುದ್ಧ ರಾಜ್ಯಗಳಿಗೆ ಡಿಜಿಸಿಐ ಎಚ್ಚರಿಕೆ

ಹೊಸದಿಲ್ಲಿ,ಮಾ.10: ಭಾರತೀಯ ಔಷಧಿ ಮಹಾ ನಿರ್ದೇಶಕ (ಡಿಜಿಸಿಐ)ರು ದಿಲ್ಲಿ ಮೂಲದ ಮಾಯಾ ಕೆಮ್ಟೆಕ್ ಇಂಡಿಯಾ ತಯಾರಿಕೆಯ ಕಚ್ಚಾ ವಸ್ತುಗಳ ಬಳಕೆಯ ವಿರುದ್ಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯ ಪರವಾನಿಗೆ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ಹೊರಡಿಸಿದ್ದಾರೆ. ಉಝ್ಬೆಕಿಸ್ತಾನದಲ್ಲಿ 19 ಮಕ್ಕಳ ಸಾವುಗಳೊಂದಿಗೆ ತಳುಕು ಹಾಕಿಕೊಂಡಿರುವ ಮಾರಿಯನ್ ಬಯೊಟೆಕ್ ತಯಾರಿಕೆಯ ಕೆಮ್ಮಿನ ಸಿರಪ್ ಗಳಿಗೆ ಕಚ್ಚಾ ಸಾಮಗ್ರಿಗಳನ್ನು ಮಾಯಾ ಕೆಮ್ಟೆಕ್ ಪೂರೈಸಿತ್ತು.
ಸ್ಯಾಂಪಲ್ ಗಳು ಪ್ರಮಾಣಿತ ಗುಣಮಟ್ಟಕ್ಕೆ ಅನುಗುಣವಾಗಿಲ್ಲ, ಹೀಗಾಗಿ ಎರಡು ಉತ್ಪನ್ನಗಳ ಮಾರಾಟ ಮತ್ತು ವಿತರಣೆಯನ್ನು ನಿಲ್ಲಿಸುವಂತೆ ಡಿಜಿಸಿಐ ಕಚೇರಿಯು ಈ ಹಿಂದೆ ಮಾರಿಯನ್ ಬಯೊಟೆಕ್ ಗೆ ನೋಟಿಸ್ ಹೊರಡಿಸಿತ್ತು. ಮಾಯಾ ಕೆಮ್ಟೆಕ್ ದೋಷಾರೋಪಕ್ಕೊಳಗಾಗಿರುವ ಬ್ಯಾಚ್ ಗಳಲ್ಲಿ ಬಳಸಲಾಗಿದ್ದ ಪ್ರೊಪಿಲಿನ್ ಗ್ಲೈಕಾಲ್ ನ ಮುಖ್ಯ ಪೂರೈಕೆದಾರನಾಗಿತ್ತು.
ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO)ಯು ಪರೀಕ್ಷೆಗೊಳಪಡಿಸಿದ 33 ಸ್ಯಾಂಪಲ್ ಗಳ ಪೈಕಿ 24 ಸ್ಯಾಂಪಲ್ ಗಳು ಪ್ರಮಾಣಿತ ಗುಣಮಟ್ಟಕ್ಕೆ ಅನುಗುಣವಾಗಿರಲಿಲ್ಲ ಮತ್ತು ಈ ಮಾದರಿಗಳು ಔಷಧಿಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ.1940ರ 17ಎ ಮತ್ತು 178ರ ಅಡಿಯಲ್ಲಿ ಕಲಬೆರಕೆ/ ನಕಲಿ ವರ್ಗಕ್ಕೆ ಸೇರುತ್ತವೆ ಎಂದು ಡಿಜಿಸಿಐ ರಾಜೀವ ಸಿಂಗ್ ರಘುವಂಶಿ ಅವರು ಪತ್ರದಲ್ಲಿ ಹೇಳಿದ್ದಾರೆ.
ಅದರಂತೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಈ ವಿಷಯದ ಬಗ್ಗೆ ಕಟ್ಟುನಿಟ್ಟಾದ ನಿಗಾ ಇರಿಸುವಂತೆ ಮತ್ತು ಅಪರಾಧಿಗಳ ವಿರುದ್ಧ ಕಾಯ್ದೆಗೆ ಅನುಗುಣವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಾರಿ ಅಧಿಕಾರಿಗಳಿಗೆ ಸೂಚಿಸುವಂತೆ ಡಿಜಿಸಿಐ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದ್ದಾರೆ.
ಮಾರಿಯನ್ ಬಯೊಟೆಕ್ ನ ಕೆಮ್ಮಿನ ಸಿರಪ್ ಸೇವನೆಯ ಬಳಿಕ 19 ಮಕ್ಕಳು ಮೃತಪಟ್ಟಿದ್ದಾರೆ ಎಂದು ಉಝ್ಬೆಕಿಸ್ತಾನ್ ಆರೋಪಿಸಿದ ಬಳಿಕ ಉತ್ತರ ಪ್ರದೇಶ ರಾಜ್ಯ ಮತ್ತು ಕೇಂದ್ರ ಔಷಧಿ ನಿಯಂತ್ರಕರ ಜಂಟಿ ತಂಡವು ಈ ಸ್ಯಾಂಪಲ್ ಗಳನ್ನು ಸಂಗ್ರಹಿಸಿತ್ತು. 2012ರಿಂದ ಉಝ್ಬೆಕಿಸ್ತಾನದಲ್ಲಿ ನೋಂದಾಯಿತ ಉದ್ಯಮ ಕಂಪನಿಯಾಗಿರುವ ಮಾರಿಯನ್ ಬಯೊಟೆಕ್ ಆಂಬ್ರೊನಾಲ್ ಮತ್ತು ಡಾಕ್-1 ಮ್ಯಾಕ್ಸ್ ಕೆಮ್ಮಿನ ಸಿರಪ್ಗಳನ್ನು ಅಲ್ಲಿಗೆ ರಫ್ತು ಮಾಡಿತ್ತು. ಜ.9ರಂದು ಕಂಪನಿಯ ಪರವಾನಿಗೆಯನ್ನು ಅಮಾನತುಗೊಳಿಸಲಾಗಿತ್ತು.







