2022ರಲ್ಲಿ ಭಾರತದ ಸ್ಥಿತಿಯು ಹಿಂದಿನ ವರ್ಷದಂತೆ ‘ಆಂಶಿಕವಾಗಿ ಸ್ವತಂತ್ರ’ವಾಗಿಯೇ ಉಳಿದಿದೆ: ಫ್ರೀಡಮ್ ಹೌಸ್ ವರದಿ

ಹೊಸದಿಲ್ಲಿ, ಮಾ. 10: 2022ರಲ್ಲಿ ಭಾರತದ ಸ್ಥಿತಿಯು ಅದಕ್ಕಿಂತ ಹಿಂದಿನ ವರ್ಷದಂತೆ ‘ಆಂಶಿಕವಾಗಿ ಸ್ವತಂತ್ರ’ವಾಗಿಯೇ ಉಳಿದಿದೆ ಎಂದು ಅಮೆರಿಕ ಸರಕಾರದಿಂದ ನಿಧಿ ಪಡೆಯುತ್ತಿರುವ ಸರಕಾರೇತರ ಸಂಘಟನೆ ‘ಫ್ರೀಡಮ್ ಹೌಸ್’ ತನ್ನ ವರದಿಯಲ್ಲಿ ಹೇಳಿದೆ.
2023ರ ಆವೃತ್ತಿಯ ‘ಫ್ರೀಡಮ್ ಇನ್ ದ ವರ್ಲ್ಡ್’ ವರದಿಯಲ್ಲಿ, ನಿರ್ದಿಷ್ಟ ಮಾನದಂಡಗಳ ಆಧಾರದಲ್ಲಿ ವರದಿಯು 195 ದೇಶಗಳಿಗೆ ಸ್ಥಾನಗಳನ್ನು ನೀಡಿದೆ. ಇದರಲ್ಲಿ ಭಾರತವು 100ರಲ್ಲಿ 66 ಅಂಕಗಳನ್ನು ಪಡೆದಿದೆ.
ಚುನಾವಣಾ ಪ್ರಕ್ರಿಯೆಗಳು, ರಾಜಕೀಯ ಬಹುತ್ವ ಮತ್ತು ಪಾಲ್ಗೊಳ್ಳುವಿಕೆ, ಸರಕಾರದ ಕಾರ್ಯನಿರ್ವಹಣೆ, ಅಭಿವ್ಯಕ್ತಿ ಮತ್ತು ನಂಬಿಕೆಯ ಸ್ವಾತಂತ್ರ, ಅಸೋಸಿಯೇಶನ್ ಮತ್ತು ಸಂಘಟನೆಗಳ ಹಕ್ಕುಗಳು, ಕಾನೂನಿನ ಆಡಳಿತ ಹಾಗೂ ವೈಯಕ್ತಿಕ ಸ್ವಾಯತ್ತೆ ಮತ್ತು ವೈಯಕ್ತಿಕ ಹಕ್ಕುಗಳು ಮುಂತಾದ ಮಾನದಂಡಗಳ ಆಧಾರದಲ್ಲಿ ದೇಶಗಳ ಸರಕಾರಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು.
ಚುನಾವಣಾ ಪ್ರಕ್ರಿಯೆಗಳ ವಿಷಯದಲ್ಲಿ ಭಾರತದ ಸಾಧನೆ ಉತ್ತಮವಾಗಿದೆ. ಅದು 4ರಲ್ಲಿ 4 ಅಂಕಗಳನ್ನು ಗಳಿಸಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದು ಮತ್ತು ಚುನಾವಣಾ ಕಾನೂನುಗಳ ಜಾರಿ ಮುಂತಾದ ವಿಷಯಗಳನ್ನು ಇದು ಒಳಗೊಂಡಿದೆ.
ಮುಸ್ಲಿಮರ ಮತದಾನದ ಹಕ್ಕು ರದ್ದಾಗುವ ಆತಂಕ
‘ರಾಜಕೀಯ ಬಹುತ್ವ’ ಮುಂತಾದ ಕೆಲವು ಮಾನದಂಡಗಳಲ್ಲಿ ಭಾರತವು ಹಿಂದೆ ಬಿದ್ದಿದೆ. ಹಲವು ವರ್ಷಗಳಿಂದ ಮಹಿಳಾ ಮತದಾರರ ಭಾಗವಹಿಸುವಿಕೆ ಹೆಚ್ಚಿದೆ ಮತ್ತು ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸ್ಥಾನಗಳನ್ನು ಮೀಸಲಿಡಲಾಗಿದೆ. ಆದರೆ ಭಾರತೀಯ ಮುಸ್ಲಿಮರ ರಾಜಕೀಯ ಹಕ್ಕುಗಳಿಗೆ ಎದುರಾಗಿರುವ ಬೆದರಿಕೆ ಮುಂದುವರಿದಿದೆ ಎಂದು ವರದಿ ಹೇಳಿದೆ. ವರದಿಯು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಸ್ತಾಪಿಸಿದೆ ಮತ್ತು ಮುಸ್ಲಿಮ್ ಮತದಾರರ ಮತದಾನದ ಹಕ್ಕನ್ನು ಸರಕಾರ ಕಿತ್ತುಕೊಳ್ಳುವ ಸಾಧ್ಯತೆಯ ಬಗ್ಗೆ ಅದು ಮಾತನಾಡಿದೆ.
ರಾಜಕೀಯ ಪ್ರಾತಿನಿಧ್ಯ ಪಡೆಯುವ ದುರ್ಬಲ ವರ್ಗದ ಪ್ರಯತ್ನಗಳಿಗೆ ಅಡೆತಡೆಗಳು ಎದುರಾಗುತ್ತಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳು 545 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಗೆದ್ದಿದ್ದಾರೆ. ಇದು ಹಿಂದಿನ ಲೋಕಸಭೆಯಲ್ಲಿದ್ದ 22 ಮುಸ್ಲಿಮ್ ಅಭ್ಯರ್ಥಿಗಳಿಗಿಂತ ಹೆಚ್ಚಾಗಿದೆ. ಆದರೆ, ಇದು ಒಟ್ಟು ಸ್ಥಾನಗಳ 5% ಮಾತ್ರ. 2011ರ ಜನಗಣತಿಯ ಪ್ರಕಾರ, ಭಾರತದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ 14.2%. 2022ರ ಕೊನೆಯ ಹೊತ್ತಿಗೆ ಬಿಜೆಪಿಯಲ್ಲಿ ಯಾವುದೇ ಮುಸ್ಲಿಮ್ ಸಂಸದರಿರಲಿಲ್ಲ.
ಪರಿಣಾಮರಹಿತ ಲೋಕಾಯುಕ್ತ ವ್ಯವಸ್ಥೆ
ಸರಕಾರದ ಕಾರ್ಯನಿರ್ವಹಣೆಯನ್ನು ವಿಶ್ಲೇಷಿಸಿರುವ ವರದಿಯು, ಲೋಕಾಯುಕ್ತ ವ್ಯವಸ್ಥೆಯಜ ಜಾರಿಯಲ್ಲಿದ್ದರೂ ಅವುಗಳು ಪರಿಣಾಮರಹಿತವಾಗಿವೆ ಎಂದು ವರದಿ ಹೇಳಿದೆ. ಹಾಗಾಗಿ, ಸರಕಾರಿ ಮಟ್ಟದಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿಗ್ರಹಿಸಲು ಸರಿಯಾದ ವ್ಯವಸ್ಥೆಗಳೇ ಇಲ್ಲ ಎಂದು ಅದು ಅಭಿಪ್ರಯಪಟ್ಟಿದೆ.
ಆರ್‌ಟಿಐ ದುರ್ಬಲ
ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯನ್ನು ಬಳಸಲಾಗುತ್ತಿದೆಯಾದರೂ, ವಿವಿಧ ಕಾರಣಗಳಿಗಾಗಿ ಅದು ತನ್ನ ಆಕರ್ಷಣೆಯನ್ನು ಕಳೆದುಕೊಂಡಿದೆ ಎಂದು ವರದಿ ಹೇಳಿದೆ. ಆಡಳಿತಕ್ಕೆ ಸಂಬಂಧಿಸಿದ ಮಹತ್ವದ ಪ್ರಶ್ನೆಗಳಿಗೆ ಉತ್ತರವೇ ಸಿಗುತ್ತಿಲ್ಲ, ಉತ್ತರಗಳನ್ನು ನೀಡದಿರುವ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ, ಆರ್ಟಿಐ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಹಾಗೂ ಅವರನ್ನು ಕೊಲೆ ಮಾಡಲಾಗುತ್ತಿದೆ ಎಂದಿದೆ.
ಅದೂ ಅಲ್ಲದೆ, ಇತ್ತೀಚೆಗೆ ಆರ್ಟಿಐ ಕಾಯ್ದೆಗೆ ಬದಲಾವಣೆಗಳನ್ನು ತರಲಾಗಿದೆ ಹಾಗೂ ಈ ಬದಲಾವಣೆಗಳು ಮಾಹಿತಿ ಕಮಿಶನರ್ಗಳನ್ನು ‘‘ರಾಜಕೀಯ ಒತ್ತಡಗಳಿಗೆ ಒಳಗಾಗುವಂತೆ’’ ಮಾಡಿವೆ ಎಂದು ಫ್ರೀಡಮ್ ಹೌಸ್ ವರದಿ ಅಭಿಪ್ರಾಯಪಟ್ಟಿದೆ.
ಪತ್ರಿಕಾ ಸ್ವಾತಂತ್ರದಲ್ಲಿ ಕುಸಿತ
‘‘ಮೋದಿ ಸರಕಾರದ ಆಳ್ವಿಕೆಯಲ್ಲಿ ಪತ್ರಿಕಾ ಸ್ವಾತಂತ್ರದ ಮೇಲಿನ ದಾಳಿಯು ಹೆಚ್ಚಾಗಿದೆ ಹಾಗೂ ಇತ್ತೀಚಿನ ವರ್ಷಗಳಲ್ಲಿ ವರದಿಗಾರಿಕೆ ಎನ್ನುವುದು ಮಹತ್ವಾಕಾಂಕ್ಷೆ ಗಣನೀಯವಾಗಿ ಕುಸಿದಿರುವ ಒಂದು ಚಟುವಟಿಕೆಯಾಗಿದೆ. ಮಾಧ್ಯಮಗಳಲ್ಲಿರುವ ಟೀಕೆಯ ಧ್ವನಿಗಳನ್ನು ಹತ್ತಿಕ್ಕಲು ಅಧಿಕಾರಿಗಳು ಭದ್ರತಾ, ಮಾನನಷ್ಟ, ರಾಷ್ಟ್ರದ್ರೋಹ ಮತ್ತು ದ್ವೇಷದ ಮಾತುಗಳ ಕಾನೂನುಗಳನ್ನು ಯಥೇಚ್ಛವಾಗಿ ಬಳಸುತ್ತಾರೆ. ಜೊತೆಗೆ ನ್ಯಾಯಾಂಗ ನಿಂದನೆ ಆರೋಪಗಳನ್ನು ಹೊರಿಸುತ್ತಾರೆ’’ ಎಂದು ವರದಿ ಹೇಳುತ್ತದೆ.
ಪತ್ರಕರ್ತರ ವಿರುದ್ಧ ಹಿಂಸಾಚಾರದಲ್ಲಿ ತೊಡಗಿರುವವರಿಗೆ ಶಿಕ್ಷೆಯಾಗುವ ಉದಾಹರಣೆಗಳು ತೀರಾ ವಿರಳ ಎಂದು ಅದು ಅಭಿಪ್ರಾಯಪಟ್ಟಿದೆ.







