ಉಡುಪಿ: ಮಾ.11ರಂದು ಪವರ್‌ನಿಂದ ಚಾರ್ಟರ್ ಡೇ
ಉಡುಪಿ, ಮಾ.10: 14 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ಸ್ಥಾಪಿತವಾದ ಉಡುಪಿಯ ಮಹಿಳಾ ಉದ್ಯಮಿಗಳ ವೇದಿಕೆ (ಪವರ್)ವತಿಯಿಂದ 15ನೇ ವಾರ್ಷಿಕೋತ್ಸವ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಚಾರ್ಟರ್‌ಡೇ ಹಾಗೂ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಾ.11ರಂದು ಅಂಬಲಪಾಡಿ ಬೈಪಾಸ್ ಬಳಿ ಇರುವ ಕಾರ್ತಿಕ್ ಎಸ್ಟೇಟ್‌ನ ಮಧುವನ ಹಾಲ್‌ನಲ್ಲಿ ನಡೆಯಲಿದೆ ಎಂದು ಹಾಲಿ ಅಧ್ಯಕ್ಷೆ ಪೂನಂ ಶೆಟ್ಟಿ ತಿಳಿಸಿದ್ದಾರೆ.
ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 5:00 ಗಂಟೆಗೆ ಪ್ರಾರಂಭಗೊಳ್ಳುವ ಕಾರ್ಯಕ್ರಮದಲ್ಲಿ ಪರಿಸರ ಕಾರ್ಯಕರ್ತೆ ದಿವ್ಯಾ ಹೆಗ್ಡೆ ಹಾಗೂ ಮಂಗಳೂರು ಎಂಎಸ್‌ಎಂಇ ಡಿಎಫ್‌ಓ ಸುಮನ್ ಎಸ್.ರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಕೇವಲ 10 ಮಂದಿ ಮಹಿಳಾ ಉದ್ಯಮಿಗಳೊಂದಿಗೆ ಪ್ರಾರಂಭಗೊಂಡ ತಮ್ಮ ಸಂಸ್ಥೆ ಇಂದು 100ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಉದ್ಯಮದಲ್ಲಿ ಮಹಿಳೆಯರ ಪಾತ್ರವನ್ನು ಕ್ರಿಯಾತ್ಮಕವಾಗಿಸುವಲ್ಲಿ ಸಂಸ್ಥೆ ಹೆಚ್ಚಿನ ಮುತುವರ್ಜಿ ವಹಿಸಿದೆ. ಮಹಿಳಾ ಉದ್ಯಮಿಗಳ ಉತ್ತೇಜನಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಸಮಾರಂಭದಲ್ಲಿ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣವೂ ನಡೆಯಲಿದೆ. ಸುವರ್ಷ ಮಿಂಜ್ ಅಧ್ಯಕ್ಷರಾಗಿ, ಶಿಲ್ಪ ಆರ್. ಶೆಟ್ಟಿ ಕಾರ್ಯದರ್ಶಿಯಾಗಿ, ರೇಷ್ಮಾ ಥೋಟಾ ಕೋಶಾಧಿಕಾರಿಯಾಗಿ, ತನುಜಾ ಮಾಬೆಲ್ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅರ್ಚನಾ ರಾವ್, ಪ್ರತಿಭಾ ಆರ್.ವಿ., ತೃಪ್ತಿ ನಾಯಕ್, ಸುವರ್ಷ ಮಿಂಜ್, ಶಿಲ್ಪ ಆರ್.ಶೆಟ್ಟಿ, ರೇಷ್ಮಾ ಥೋಟಾ ಮುಂತಾದವರು ಉಪಸ್ಥಿತರಿದ್ದರು.







