ಇಮ್ರಾನ್ ಖಾನ್ ಬಂಧನ ವಾರಂಟ್ 2 ವಾರ ಅಮಾನತು

ಇಸ್ಲಮಾಬಾದ್, ಮಾ.10: ದ್ವೇಷಭಾಷಣ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸ್ವಲ್ಪ ನಿರಾಳರಾಗಿದ್ದು, ಅವರ ವಿರುದ್ಧದ ಜಾಮೀನುರಹಿತ ಬಂಧನದ ವಾರಂಟ್ ಅನ್ನು ಬಲೂಚಿಸ್ತಾನದ ಹೈಕೋರ್ಟ್ ಶುಕ್ರವಾರ 2 ವಾರ ಅಮಾನತುಗೊಳಿಸಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.
ಸರಕಾರಿ ಸಂಸ್ಥೆಗಳ ವಿರುದ್ಧ ದ್ವೇಷಭಾಷಣ ಮಾಡುವ ಮೂಲಕ ಜನರನ್ನು ಸರಕಾರದ ವಿರುದ್ಧ ಎತ್ತಿಕಟ್ಟುವ ಆರೋಪದಡಿ ಇಮ್ರಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನೈರತ್ಯ ಪಾಕಿಸ್ತಾನದ ನ್ಯಾಯಾಲಯ ಇಮ್ರಾನ್ ವಿರುದ್ಧ ಜಾಮೀನುರಹಿತ ಬಂಧನಕ್ಕೆ ವಾರಂಟ್ ಜಾರಿಗೊಳಿಸಿದ್ದು ಅವರನ್ನು ಬಂಧಿಸಲು ಕ್ವೆಟ್ಟಾದ ಪೊಲೀಸರು ಲಾಹೋರ್ಗೆ ಆಗಮಿಸಿದ್ದರು. ಆದರೆ ಕಡೆಹಂತದಲ್ಲಿ ಬಲೂಚಿಸ್ತಾನದ ಹೈಕೋರ್ಟ್ ಬಂಧನ ವಾರಂಟ್ ಅನ್ನು 2 ವಾರ ಅಮಾನತುಗೊಳಿಸಿದ ಜತೆಗೆ, ಬಲೂಚಿಸ್ತಾನ ಪೊಲೀಸ್ ಮುಖ್ಯಸ್ಥರಿಗೆ ನ್ಯಾಯಾಲಯದಲ್ಲಿ ಹಾಜರಾಗುವಂತೆ ಸಮನ್ಸ್ ನೀಡಿ , ವಿಚಾರಣೆಯನ್ನು 2 ವಾರ ಮುಂದೂಡಿದೆ ಎಂದು ವರದಿಯಾಗಿದೆ.
Next Story





