ದಿಲ್ಲಿ ಮಹಿಳಾ ಆಯೋಗಕ್ಕೆ ಆಪ್ ಬೆಂಬಲಿಗರ ನೇಮಕ ಆರೋಪ: ಸ್ವಾತಿಮಲಿವಾಲ್ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ

ಹೊಸದಿಲ್ಲಿ,ಮಾ.10: ದಿಲ್ಲಿ ಮಹಿಳಾ ಆಯೋಗ (DCW)ಕ್ಕೆ ಆಮ್ ಆದ್ಮಿ ಪಕ್ಷದ ಮಖಂಡರನ್ನೇ ನೇಮಕ ಮಾಡಿದ್ದಾರೆನ್ನಲಾದ ಆರೋಪಕ್ಕೆ ಸಂಬಂಧಿಸಿ ಡಿಸಿಡಬ್ಲು ಅಧ್ಯಕ್ಷೆ ಸ್ವಾತಿ ಮಲಿವಾಲ್ ವಿರುದ್ಧ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ನಡೆಯಲಿದ್ದ ವಿಚಾರಣಾ ಕಲಾಪಗಳಿಗೆ ದಿಲ್ಲಿ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ದಿಲ್ಲಿ ಮಹಿಳಾ ಆಯೋಗದ ವಿವಿಧ ಹುದ್ದೆಗಳಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ನೇಮಿಸಲು ತನ್ನ ಹುದ್ದೆಯನ್ನು ದುರುಪಯೋಗಪಡಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಲಿವಾಲ್ ಮತ್ತಿತರರ ವಿರುದ್ಧ ದೋಷಾರೋಪ ಹೊರಿಸುವಂತೆ ದಿಲ್ಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಕಳೆದ ವರ್ಷದ ಡಿಸೆಂಬರ್ನಲ್ಲಿ ಆದೇಶಿಸಿತ್ತು.
ಮಲಿವಾಲ್ ಅವರಲ್ಲದೆ ಡಿಸಿಡಬ್ಲುನ ಮಾಜಿ ಸದಸ್ಯರಾದ ಪ್ರಮೀಳಾ ಗುಪ್ತಾ, ಸಾರಿಕಾ ಚೌಧುರಿ ಹಾಗೂ ಫರ್ಹೀನ್ ಮಾಲಿಕ್ ಅವರನ್ನೂ ವಿಚಾರಣೆಗೊಳಪಡಿಸಬೇಕೆಂದು ವಿಶೇಷ ನ್ಯಾಯಾದೀಶ ವಿನಯ ಸಿಂಗ್ ಆದೇಶಿಸಿದ್ದರು.
ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ನಡಿ 120-ಬಿ (ಕ್ರಿಮಿನಲ್ ಸಂಚು), ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1) (ಡಿ) ( ಸಾರ್ವಜನಿಕ ಉದ್ಯೋಗಿಯಿಂದ ಕ್ರಿಮಿನಲ್ ದುರ್ನಡತೆ) ನಡಿ ಮಲಿವಾಲ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ರೌಸ್ ಆವೆನ್ಯೂ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಲಿವಾಲ್ ಮತ್ತಿತರರು ಹೈಕೋರ್ಟ್ ಮೆಟ್ಟಲೇರಿದ್ದರು. ಹೈಕೋರ್ಟ್ನಲ್ಲಿ ಮಲಿವಾಲ್ ಪರ ವಾದಮಂಡಿಸಿದ ಹಿರಿಯ ನ್ಯಾಯವಾದಿ ರೆಬೆಕ್ಕಾ ಜಾನ್ ಅವರು, ಡಿಸಿಡಬ್ಲುಗೆ ನೇಮಕಗೊಂಡವರಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆಗಳ ನಿಗಾದಲ್ಲಿ ಅನುಭವವಿರುವ ನ್ಯಾಯವಾದಿಗಳೂ ಇದ್ದಾರೆ ಹಾಗೂ ಈ ನೇಮಕಾತಿಗಳು ಅಲ್ಪಾವಧಿಯ ಗುತ್ತಿಗೆಯಾಧಾರದ್ದಾಗಿವೆ ಎಂದು ಹೇಳಿದ್ದರು.
ಆಲಿಕೆ ನಡೆಸಿ ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಅನೂಪ್ ಜೈರಾಮ್ ಭಾಮ್ಭಾನಿ ಅವರು ‘‘ಪ್ರಕರಣ ವನ್ನು ನಿಕಟವಾಗಿ ಪರಿಶೀಲಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆಲಿಕೆಯನ್ನು ಜುಲೈ 23ರವರೆಗೆ ಮುಂದೂಡಲಾಗಿದೆ’’ ಎಂದು ತಿಳಿಸಿದರು.







