ಕಾಫಿ ಪುಡಿಗೆ ‘ಚಿಕೋರಿ’ ಬೆರೆಸುವುದನ್ನು ನಿಷೇಧ ಮಾಡದಿದ್ದರೆ ಹೋರಾಟದ ಎಚ್ಚರಿಕೆ

ಬೆಂಗಳೂರು, ಮಾ.10: ಕಾಫಿ ಪುಡಿಗೆ ಕಲಬೆರಿಕೆ ವಸ್ತು ಚಿಕೋರಿಯನ್ನು ಬೆರೆಸುವುದನ್ನು ನಿಲ್ಲಿಸದಿದ್ದರೆ, ರಾಜ್ಯದಲ್ಲಿ ಉಗ್ರಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ‘ಚಿಹಾಕೊ(ಚಿಕ್ಕಮಗಳೂರು, ಹಾಸನ, ಕೊಡಗು) ಕಾಫಿ’ ಸಹಕಾರ ಸಂಗಮ ಸಂಘಟನೆಯ ಸಂಸ್ಥಾಪಕ ಎಸಳೂರು ಉದಯಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಕೇಂದ್ರ ಕಾಫಿ ಮಂಡಳಿಯ ಕಾರ್ಯದರ್ಶಿ ಜಗದೀಶ್‍ಗೆ ಪತ್ರ ಬರೆದಿರುವ ಅವರು, ಹಿಂದೆ ಕಾಫಿ ಮಂಡಳಿಯಲ್ಲಿದ್ದ ಭ್ರಷ್ಟರಿಂದ ಚಿಕೋರಿಯನ್ನು ಕಾಫಿ ಪುಡಿಯೊಂದಿಗೆ ಬೆರೆಸುವ ವಂಚನೆಗೆ ಅವಕಾಶ ಮಾಡಿಕೊಡಲಾಗಿತ್ತು. ಇದು ಬೆಳೆಗಾರರು ಮತ್ತು ಕಾಫಿ ಗ್ರಾಹಕರಿಬ್ಬರಿಗೂ ಅಪಾರ ಕಷ್ಟ ನಷ್ಟಗಳನ್ನು ತಂದಿದೆ ಎಂದು ತಿಳಿಸಿದ್ದಾರೆ.
ಈಗಲಾದರೂ ಕಾಫಿ ಮಂಡಳಿಯ ಅಧಿಕಾರಿಗಳು ಹಾಗೂ ಸದಸ್ಯರು ಎಚ್ಚೆತ್ತುಕೊಂಡು ಚಿಕೋರಿಯನ್ನು ನಿಷೇಧಿಸಬೇಕು. ಇದರಿಂದ ಕಾಫಿಯ ಆಂತರಿಕ ಮಾರುಕಟ್ಟೆ ಅಭಿವೃದ್ಧಿಗೆ ಅನುಕೂಲವಾಗಲಿದೆ. ಅಲ್ಲದೆ ಗ್ರಾಹಕರಿಗೂ ಪರಿಶುದ್ಧವಾದ ಕಾಫಿಪುಡಿ ಸಿಗುವಂತೆ ದಾರಿಮಾಡಿಕೊಟ್ಟಂತಾಗುತ್ತದೆ ಎಂದು ಅವರು ದೂರಿದ್ದಾರೆ.
ಆರೋಗ್ಯದ ದೃಷ್ಟಿಯಿಂದಲೂ ಕಾಫಿಪುಡಿಯೊಂದಿಗೆ ಚಿಕೋರಿ ಬೆರೆಸುವುದರಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ. ಚಿಕೋರಿ ಬೆರೆಸಿದ ಕಾಫಿ ಕಷಾಯವು ಕೆಲವೇ ಗಂಟೆಗಳಲ್ಲಿ ಮೇಲ್ಬಾಗದಲ್ಲಿ ಬಿಳಿ ಬಿಳಿಯಾದ ತೆರೆಯು ಬಂದು ಹುಳಿ ಬರಲಾರಂಭಿಸುತ್ತದೆ. ಇದನ್ನು ಕುಡಿದರೆ ವಾಯು ಪ್ರಕೋಪ ಹಾಗೂ ಬುದ್ದಿ ಮಾಂದ್ಯತೆಗಳಂತಹ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದಶಕಗಳ ಹಿಂದೆ ಕಾಫಿ ಮಂಡಳಿ ತೆಗೆದುಕೊಂಡ ತಪ್ಪು ನಿರ್ಧಾರವು ಬೆಳೆಗಾರರು ಹಾಗೂ ಅಮಾಯಕ ಗ್ರಾಹಕರನ್ನು ಶೋಷಣೆ ಮಾಡಿದೆ. ಹಾಗಾಗಿ ಕಾಫಿಪುಡಿಗೆ ಚಿಕೋರಿಯನ್ನು ಬೆರೆಸುವುದನ್ನು ನಿಷೇಧಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡು ಬಡ ಕಾಫಿ ಬೆಳೆಗಾರರು ಹಾಗೂ ಗ್ರಾಹಕರ ಕ್ಷೇಮಕ್ಕೆ ನಾಂದಿಹಾಡಬೇಕೆ ಎಂದು ಅವರು ತಿಳಿಸಿದ್ದಾರೆ.







