ಶೇಕಡ 100 ಮಹಿಳಾ ಮೀಸಲಾತಿ ಕಾನೂನುಬಾಹಿರ: ಹೈಕೋರ್ಟ್ ತೀರ್ಪು

ರಾಯಪುರ: ಮಹಿಳೆಯರಿಗೆ ಶೇಕಡ 100ರಷ್ಟು ಮೀಸಲಾತಿ ನೀಡುವ ಕ್ರಮ ಅಸಂವಿಧಾನಿಕ ಎಂದು ಅಭಿಪ್ರಾಯಪಟ್ಟಿರುವ ಛತ್ತೀಸ್‍ಗಢ ಹೈಕೋರ್ಟ್, ಈ ಸಂಬಂಧ ರಾಜ್ಯ ಸರ್ಕಾರ ನೀಡಿದ ಜಾಹೀರಾತನ್ನು ರದ್ದುಪಡಿಸಿದೆ.
ಮುಖ್ಯ ನ್ಯಾಯಮೂರ್ಯಿ ಅರೂಪ್ ಕುಮಾರ್ ಗೋಸ್ವಾಮಿ ಮತ್ತು ನ್ಯಾಐಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಇದಕ್ಕೆ ಸಂಬಂಧಿಸಿದಂತೆ ಛತ್ತೀಸ್‍ಗಢ ಸರ್ಕಾರ ರೂಪಿಸಿದ್ದ ಕಾನೂನನ್ನು ಅನೂರ್ಜಿತಗೊಳಿಸಿದೆ. ಸರ್ಕಾರಿ ನರ್ಸಿಂಗ್ ಕಾಲೇಜುಗಳಲ್ಲಿ ಬೋಧಕರು (ಡೆಮಾಸ್ಟ್ರೇಟರ್ಸ್) ಪ್ರೊಫೆಸರ್ ಗಳು ಮತ್ತು ಪ್ರಾಚಾರ್ಯ ಹುದ್ದೆಗಳಿಗೆ ನೇರವಾಗಿ ನೇಮಕಗೊಳ್ಳಲು ಮಹಿಳಾ ಅಭ್ಯರ್ಥಿಗಳಷ್ಟೇ ಅರ್ಹರು ಎಂದು ರಾಜ್ಯ ಸರ್ಕಾರ ಪ್ರಕಟಿಸಿತ್ತು.
ಛತ್ತೀಸ್‍ಗಢ ಲೋಕಸೇವಾ ಆಯೋಗ 2021ರ ಡಿಸೆಂಬರ್ 8ರಂದು ನೀಡಿದ ಜಾಹೀರಾತಿನಲ್ಲಿ ಸಹಾಯಕ ಪ್ರೊಫೆಸರ್ (ನರ್ಸಿಂಗ್) ಮತ್ತು ವಿವಿಧ ವಿಷಯಗಳಿಗೆ ಬೋಧಕ ಹುದ್ದೆಗಳಿಗೆ ಕಾನೂನುಬದ್ಧವಾಗಿ ಮಹಿಳೆಯರಿಂದಷ್ಟೇ ಅರ್ಜಿ ಆಹ್ವಾನಿಸಲಾಗುತ್ತಿದೆ ಎಂದು ಪ್ರಕಟಿಸಿತ್ತು.
ಅಭಯ್ ಕುಮಾರ್ ಕಿಸ್ಪೊತ್ತಾ, ಡಾ.ಅಜಯ್ ತ್ರಿಪಾಠಿ, ಅಲಿಯಸ್ ಕ್ಸಾಲ್ಕೊಸೊ ಮತ್ತು ಇತರರು ಈ ಬಗ್ಗೆ ಹೈಕೋರ್ಟ್‍ನ ಮೊರೆ ಹೋಗಿದ್ದರು. ವೈದ್ಯಕೀಯ ಶಿಕ್ಷಣ (ಗಜೆಟೆಡ್) ಸೇವಾ ನೇಮಕಾತಿ ನಿಯಮಾವಳಿ-2013ರ ಟಿಪ್ಪಣಿ-2ರ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಲಾಗಿತ್ತು ಎಂದು ವಕೀಲ ನೆಲ್ಸನ್ ಪನ್ನಾ ಹಾಗೂ ಘನಶ್ಯಾಮ ಕಶ್ಯಪ್ ಹೇಳಿದ್ದಾರೆ.







